ಮಂಗಳವಾರ, ಅಕ್ಟೋಬರ್ 15, 2019
27 °C
ಮಡಿಕೇರಿಯ ಗಾಂಧಿ ಮೈದಾನದ ತುಂಬ ಮಕ್ಕಳ ಕಲರವ

ಕೊಡಗು ದಸರಾ: ಬದುಕಿನ ಪಾಠ ಕಲಿಸಿದ ‘ಸಂತೆ’ ಸಂಭ್ರಮ

Published:
Updated:
Prajavani

ಮಡಿಕೇರಿ: ಅದು ಮಕ್ಕಳಿಗೇ ಆಯೋಜಿಸಿದ್ದ ಕಾರ್ಯಕ್ರಮ. ಮಕ್ಕಳೇ ಅಲ್ಲಿ ಪ್ರಮುಖ ಆಕರ್ಷಣೆ. ಮಕ್ಕಳ ಸಂತೆ, ವಿವಿಧ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ, ಮಂಟಪದಲ್ಲಿ ಪೌರಾಣಿಕ ಕತೆ ಕಟ್ಟಿಕೊಡುವ ಬಗೆ... ಈ ಎಲ್ಲ ದೃಶ್ಯಾವಳಿಗಳು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬುಧವಾರ ಕಂಡುಬಂದವು.

ದಸರಾ ಸಮಿತಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್‌ ಆಶ್ರಯದಲ್ಲಿ ನಡೆದ 6ನೇ ವರ್ಷದ ‘ಮಕ್ಕಳ ದಸರಾ’ದಲ್ಲಿ ಮಕ್ಕಳ ಸಂಭ್ರಮ, ಆನಂದ, ಅವರ ಪಠ್ಯೋತರ ಚಟುವಟಿಕೆಗೆ ಪೋಷಕರೂ ಪ್ರತ್ಯಕ್ಷ ಸಾಕ್ಷಿಯಾದರು. ಮಕ್ಕಳ ದಸರಾವು ಕೇವಲ ಸಂಭ್ರಮಕ್ಕೆ ಸೀಮಿತಗೊಳ್ಳಲಿಲ್ಲ; ಬದುಕಿನ ಪಾಠವಾಗಿದ್ದು ಸತ್ಯ. ನಿತ್ಯವೂ ಶಾಲೆ, ಓದು, ಮನೆ ಪಾಠದಲ್ಲಿ ಮುಳುಗುತ್ತಿದ್ದ ಮಕ್ಕಳು ಅದೆಲ್ಲವನ್ನೂ ಮರೆತು ಸಂಭ್ರಮಿಸಿದ್ದು ಕಂಡುಬಂತು. ಮಡಿಕೇರಿ ದಸರಾದಲ್ಲಿ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಮಕ್ಕಳ ದಸರಾಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 

‘ನಿತ್ಯವೂ ಓದಿನ ವಿಚಾರದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುತ್ತೇವೆ. ಈ ಒತ್ತಡದಿಂದ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನೂ ಬೀರುತ್ತಿದೆ. ಮಕ್ಕಳ ದಸರಾಕ್ಕೆ ಈ ಬಾರಿಯೂ ವಿದ್ಯಾರ್ಥಿಗಳು ಆಸಕ್ತಿ ಹಾಗೂ ಕುತೂಹಲದಿಂದ ಬಂದಿದ್ದಾರೆ. ಭವಿಷ್ಯದಲ್ಲಿ ಇದು ಇನ್ನಷ್ಟು ಯಶಸ್ಸಿನತ್ತ ದಾಪುಗಾಲು ಇಡಲಿದೆ. ಮಕ್ಕಳ ಸಂತೆಯಿಂದ ಮಕ್ಕಳು ಕಲಿಯುವ ಪ್ರಾಯೋಗಿಕ ಪಾಠ ದೊಡ್ಡದ್ದು’ ಎಂದು ಪೋಷಕರಾದ ಮನು ಹೇಳಿದರು.

ಒಂದು ವಾರದ ತಯಾರಿ: ವಿದ್ಯಾರ್ಥಿ ಫಿರೋಜ್‌ ಮಾತನಾಡಿ, ‘ಪಾನಿಪುರಿ ವ್ಯಾಪಾರಕ್ಕೆ ವಾರದಿಂದ ತಯಾರಿ ಮಾಡಿಕೊಂಡಿದ್ದೆ. ಈ ವ್ಯಾಪಾರವು ನನಗೆ ಸಾಕಷ್ಟು ಪಾಠ ಕಲಿಸಿತು. ನಮ್ಮ ಪೋಷಕರೂ ಬದುಕಿಗೆ ಸಾಕಷ್ಟು ಶ್ರಮಿಸುತ್ತಾರೆ. ಅವರ ಕಷ್ಟದ ಕುರಿತು ನಮಗೇ ಅರಿವು ಇರುವುದಿಲ್ಲ. ಈ ವ್ಯಾಪಾರವು ಸಂಭ್ರಮಕ್ಕೆ ಮಾತ್ರ ಸೀಮಿತಗೊಳ್ಳದೇ, ಶ್ರಮ ವಹಿಸಿ ದುಡಿಮೆ ಮಾಡುವ ಪರಿಯೂ ಅರಿವಾಯಿತು’ ಎಂದು ನುಡಿದ. ಆತನ ಮಾತಿನಲ್ಲೂ ಅರ್ಥವಿತ್ತು. ಹೀಗೆ ಮಕ್ಕಳ ಸಂತೆ ನಾನಾ ರೀತಿಯ ಪ್ರಾಯೋಗಿಕ ಬೋಧನೆ ಕಲಿಸಿತು.

ಪೋಷಕರಲ್ಲಿ ಆನಂದ ಭಾಷ್ಪ: ಮಕ್ಕಳು ಸ್ಪರ್ಧೆ, ವ್ಯಾಪಾರವೆಂದು ಪ್ರತಿಭೆ ಅನಾವರಣ ಮಾಡುತ್ತಿದ್ದರೆ, ಪೋಷಕರೂ ಅವರೊಂದಿಗೆ ಮಕ್ಕಳಾಗಿಯೇ ಸಂಭ್ರಮಿಸಿದರು. ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳಿಗೆ ವೇದಿಕೆ ಕಲ್ಪಿಸಲು ಪ್ರಯತ್ನಿಸುವ ತಾಯಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ನೆರೆದಿದ್ದರು. ಮಕ್ಕಳ ಪಠ್ಯೇತರ ಚಟುವಟಿಕೆಯಲ್ಲಿ ಅವರೂ ತಾಳ್ಮೆಯಿಂದ ಭಾಗಿಯಾದರು.

ಛದ್ಮವೇಷದಲ್ಲಿ ನಾನಾ ಸಂದೇಶ: ಛದ್ಮವೇಷ ಸ್ಪರ್ಧೆಯಲ್ಲಿ 72 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುಟ್ಟ ಮಕ್ಕಳಾದರೂ ಸಮಾಜಕ್ಕೆ ನಾನಾ ಸಂದೇಶ ರವಾನಿಸಿದರು. ನೀರಿನ ಮಿತ ಬಳಕೆ, ರೈತನ ಸೇವೆ, ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ನಿಷೇಧ... ಹೀಗೆ ನಾನಾ ರೀತಿಯ ಸಂದೇಶಗಳನ್ನು ಮಕ್ಕಳು ಅಭಿನಯದ ಮೂಲಕ ತಿಳಿಸುವ ಪ್ರಯತ್ನ ಎಲ್ಲರ ಗಮನ ಸೆಳೆಯಿತು.

‘ಜನೋತ್ಸವ ಆಗಲಿ’: ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌, ಮಡಿಕೇರಿಯಲ್ಲಿ ನಡೆಯುತ್ತಿರುವುದು ಬರೀ ದಸರಾವಲ್ಲ. ಇದು ಹೆಸರಿಗೆ ತಕ್ಕಂತೆ ಜನೋತ್ಸವ ಆಗಬೇಕು. ಮೊದಲು ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಬಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಿತ್ತು ಎಂದು ವಿಷಾದಿಸಿದರು.

‘ಮಳೆಯಿಂದ ಆಗಸ್ಟ್‌ ನಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹೀಗಾಗಿ, ದಸರಾ ಸಂಭ್ರಮಕ್ಕೆ ರಜೆ ನೀಡಲು ಸಾಧ್ಯವಾಗಿಲ್ಲ. ಆದರೆ, ಅ. 3, 4 ಹಾಗೂ 5ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಲಕ್ಷ್ಮೀಪ್ರಿಯಾ, ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಪೌರಾಯುಕ್ತ ರಮೇಶ್‌, ಬಿ.ಕೆ.ಜಗದೀಶ್‌, ಬಿ.ಆರ್‌. ಜಗದೀಶ್‌, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವಿ ಹಾಜರಿದ್ದರು. ಎಚ್‌.ಟಿ. ಅನಿಲ್‌ ನಿರೂಪಿಸಿದರು.

Post Comments (+)