ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳಕ್ಕೆ ಹೊಸ ಸೈನಿಕನ ಬಾಧೆ!

ಬೆಳೆ ಉಳಿಸಲು ಅಗತ್ಯ ಕ್ರಮಕ್ಕೆ ಕೃಷಿ ತಜ್ಞರ ಸಲಹೆ
Last Updated 30 ಜೂನ್ 2019, 16:13 IST
ಅಕ್ಷರ ಗಾತ್ರ

ಚಿಂತಾಮಣಿ: ಜೋಳದ ಬೆಳೆಗೆ ಹೊಸ ಸೈನಿಕ ಹುಳುವಿನ ಬಾಧೆಯಿಂದ ಶೇ 40ರಿಂದ 60ರಷ್ಟು ಬೆಳೆ ಹಾನಿಯಾಗುತ್ತಿದೆ. ಅವುಗಳ ಹತೋಟಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಆರ್.ಮಂಜುನಾಥ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲ ಕಾಲಕ್ಕೂ ಬೆಳೆಯುವ ಮುಸುಕಿನ ಜೋಳಕ್ಕೆ ಹೊಸ ಸೈನಿಕ ಹುಳುವಿನ ಬಾಧೆ ಹೆಚ್ಚುತ್ತಿದೆ. ಮುಸುಕಿನ ಜೋಳವು ಜಾನುವಾರು ಮತ್ತು ಕೋಳಿಗಳಿಗೆ ಆಹಾರವಾಗಿ ಉಪಯೋಗಿಸುತ್ತಾರೆ. ಬೆಳವಣಿಗೆ ಹಂತದಲ್ಲಿರುವ ಮುಸುಕಿನ ಜೋಳದ ಬೆಳೆಗೆ ಹೊಸ ಸೈನಿಕ ಹುಳುಗಳ ಬಾಧೆಯ ಸಮಸ್ಯೆ ಎದುರಿಸುತ್ತಿರುವ ದೂರುಗಳು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಸೈನಿಕ ಹುಳು ಮೂಲತಃ ಅಮೆರಿಕ ದೇಶದ್ದಾಗಿದೆ. ವೈಜ್ಞಾನಿಕವಾಗಿ ಸ್ಪೊಡೊಪ್ಪರಾ ಪ್ರುಟಿಫರ್ಡಾ ಎಂದು ಕರೆಯುತ್ತಾರೆ. ಈ ಹುಳುವಿನ ಸಣ್ಣ ಮರಿಗಳು ಎಲೆಗಳ ಪತ್ರಹರಿತ್ತನ್ನು ತಿನ್ನುತ್ತವೆ. ಬೆಳೆದ ಹುಳುಗಳು ಸುಳಿಯನ್ನು ಕೊರೆದು ತಿನ್ನುವುದರಿಂದ ಹೆಚ್ಚು ಹಾನಿಯಾಗುತ್ತದೆ. ಹಾನಿಯಾದ ಜೋಳ ದಂಟಿನ ಸುಳಿಯಲ್ಲಿ ಹುಳುವಿನ ಹಿಕ್ಕೆಯನ್ನು ಕಾಣಬಹುದು ಎಂದು ಅವರು ಹೇಳುತ್ತಾರೆ.

ಹುಳುಗಳ ಉತ್ಪತ್ತಿ: ಈ ಹುಳುಗಳು ಮೊಟ್ಟೆಗಳಿಂದ ಉತ್ಪತ್ತಿಯಾಗುತ್ತವೆ. 100-200 ಮೊಟ್ಟೆಗಳನ್ನು ಎಲೆಗಳ ಮೇಲೆ ಗುಂಪಾಗಿ ಇಡುತ್ತವೆ. ಕೆಲವು ಹುಳುಗಳು 1,500-2,000 ವರೆಗೆ ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿರುತ್ತವೆ. ಮೊಟ್ಟೆ ಮರಿಯಾಗಿ 6 ಹಂತಗಳ ನಂತರ 14 ರಿಂದ 30 ದಿನಗಳಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಮಣ್ಣಿನಿಂದ ಗೂಡು ಕಟ್ಟುತ್ತದೆ. ಬೇಸಿಗೆಯಲ್ಲಿ 8ರಿಂದ10 ದಿವಸ, ಚಳಿಗಾಲದಲ್ಲಿ 20-30 ದಿನಗಳಲ್ಲಿ ಕೋಶಾವಸ್ಥೆ ಮುಗಿಸುತ್ತದೆ. ಪ್ರೌಢಕೀಟವು ನಿಶಾಚರಿಯಾಗಿದ್ದು ಒಣಹವೆಯಿಂದ ಕೂಡಿದ ಸಾಯಂಕಾಲ ಚುರುಕಾಗಿರುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ 8ರಿಂದ 10 ದಿನಗಳ ಕಾಲ ಬದುಕುತ್ತವೆ ಎಂದು ಅವರು ಮಾಹಿತಿ ನೀಡಿದರು.

ಹತೋಟಿ ಕ್ರಮಗಳು: ಬೆಳೆಯ ಎಲೆಗಳ ಮೇಲೆ ಗುಂಪಾಗಿಟ್ಟಿರುವ ಮೊಟ್ಟೆಗಳನ್ನು ಕೈಯಿಂದ ನಾಶಪಡಿಸಬೇಕು. ಮರಿಹುಳು ಹತೋಟಿಗೆ ಶೇ 5ರ ಅಜಾಡಿರಕ್ಟಿನ್ 30 ಮಿ.ಲೀ. ಬೇವಿನ ಮೂಲದ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಜೈವಿಕ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ ನ್ಯಮರಿಯಾರಿಲೇ ಶಿಲೀಂಧ್ರ ಕೀಟನಾಶಕವನ್ನು 2 ಗ್ರಾಂ. ಮಿಶ್ರಣ ಮಾಡಿ ಸಿಂಪಡಿಸಬೇಕು. ಸಿಂಪರಣಾ ದ್ರಾವಣ ನೇರವಾಗಿ ಸುಳಿಯೊಳಗೆ ಬೀಳುವಂತೆ ಸಿಂಪಡಿಸಬೇಕು ಎಂದು ಮಂಜುನಾಥ್ ಸಲಹೆ ನೀಡುತ್ತಾರೆ.

ಮಾಹಿತಿಗೆ: ಡಾ.ಆರ್.ಮಂಜುನಾಥ್: 9449866930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT