ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಜಯಂತಿಗೆ ಸಿಎಂ ಗೈರು: ಸಮಾಜದ ಮುಖಂಡರ ಆಕ್ರೋಶ

ಬಿಜೆಪಿ ಟೀಕೆ
Last Updated 24 ಅಕ್ಟೋಬರ್ 2018, 16:21 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಭಾಗವಹಿಸದೇ ಇರುವುದು ವಾಲ್ಮೀಕಿ ಸಮಾಜದ ಮುಖಂಡರ ಆಕ್ರೋಶಕ್ಕೆ ತುತ್ತಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರೂ ಮುಖ್ಯಮಂತ್ರಿ ಭಾಗವಹಿಸದೇ ಇರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಯವರು ಈ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಿದ್ದೆ. ಅವರು ಬರಲಿಲ್ಲ. ಇದರಿಂದ ತುಂಬಾ ಬೇಸರವಾಯಿತು’ ಎಂದರು.

ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡರು ಬಹಳ ಹೊತ್ತು ಕಾದು ಕುಳಿತ್ತಿದ್ದರು. ಅವರು ಬರದೇ ಕಾರ್ಯಕ್ರಮ ಆರಂಭಿಸುವುದು ಬೇಡ ಎಂದೂ ಪಟ್ಟು ಹಿಡಿದರು. ಅನಾರೋಗ್ಯ ಕಾರಣ ಬರುವುದಿಲ್ಲ ಎಂಬುದು ಗೊತ್ತಾದ ತಕ್ಷಣ, ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಇನ್ನೂ ಕೆಲವರು, ‘ಮುಖ್ಯಮಂತ್ರಿ ಬರುವುದಿಲ್ಲ ಎಂದಾದ ಮೇಲೆ ಎಲ್‌ಇಡಿ ಪರದೆ ಮೇಲೆ ಅವರ ಚಿತ್ರ ಏಕೆ ತೋರಿಸುತ್ತೀರಿ’ ಎಂದು ಆಕ್ಷೇಪಿಸಿದರು. ಆ ಬಳಿಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚಿತ್ರ ಪ್ರದರ್ಶಿಸುವುದನ್ನು ನಿಲ್ಲಿಸಲಾಯಿತು.

ವಾಲ್ಮೀಕಿ ಸಮುದಾಯದ ಯುವಕರು ಗುಂಪುಗೂಡಿ ಬ್ಯಾಂಕ್ವೆಟ್‌ ಸಭಾಂಗಣದ ಹೊರಗೆ, ‘ಕುಮಾರಣ್ಣ ಕಾರ್ಯಕ್ರಮಕ್ಕೆ ಬರದೇ ವಾಲ್ಮೀಕಿಗೆ ಅವಮಾನ ಮಾಡಿದ್ದಾರೆ, ಅವರು ಬರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ದೂರಿ ಧಿಕ್ಕಾರ ಕೂಗಿದರು.

ಅನಾರೋಗ್ಯದಿಂದ ಮುಖ್ಯಮಂತ್ರಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಎಚ್‌.ಡಿ.ದೇವೇಗೌಡ ಅವರು ಬೆಳಿಗ್ಗೆ ಲಂಡನ್‌ಗೆ ತೆರಳಿದ್ದರಿಂದ ವಾಲ್ಮೀಕಿ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಲಂಡನ್‌ನಿಂದ ಮರಳಿದ ಬಳಿಕ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಮಾಯಣದ ಮೌಲ್ಯವೇ ದಾರಿ ದೀಪ:ರಾಮಾಯಣದ ಆಶಯ, ಸಂದೇಶ ಮತ್ತು ಮೌಲ್ಯಗಳನ್ನು ಪ್ರತಿ ನಿತ್ಯ ಎಲ್ಲರೂ ಅನುಸರಿಸಬೇಕು. ಇದು ಸರ್ಕಾರ ಮತ್ತು ಜನತೆಗೂ ಆದರ್ಶವಾಗಬೇಕು ಎಂದು ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿಎಚ್.ಎನ್. ನಾಗಮೋಹನ ದಾಸ್‌ ಹೇಳಿದರು.

ಬಿಜೆಪಿ ಟೀಕೆ

ರಾಜ್ಯ ಸರ್ಕಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭಾಗವಹಿಸದೇ ಮಹರ್ಷಿ ವಾಲ್ಮೀಕಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಟೀಕಿಸಿದ್ದಾರೆ.

ಬುಡಕಟ್ಟು ಜನರ ಕಲ್ಯಾಣಕ್ಕೆ ಶ್ರಮಿಸಿದ ವ್ಯಕ್ತಿಯನ್ನು ಗುರುತಿಸಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡುವುದರ ಬದಲು ಮುಖ್ಯಮಂತ್ರಿಯವರ ತಂದೆ ಎಚ್‌.ಡಿ.ದೇವೇಗೌಡರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರೂ ಕಾರ್ಯಕ್ರಮದತ್ತ ಸುಳಿದಿಲ್ಲ. ಇದು ಸಮ್ಮಿಶ್ರ ಸರ್ಕಾರಕ್ಕೆ ವಾಲ್ಮೀಕಿ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಜನರ ಕ್ಷಮೆ ಕೇಳಲಿ: ಬಿಎಸ್‌ವೈ ಆಗ್ರಹ

ಬಾಗಲಕೋಟೆ: ‘ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಆ ಸಮಾಜಕ್ಕೆ ಅಪಮಾನ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.

ಜಮಖಂಡಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಬೆಂಗಳೂರಿನಲ್ಲಿಯೇ ಇದ್ದರೂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಹೋಗಲಿಲ್ಲ. ದೇವೇಗೌಡರಿಗೆ ಪ್ರಶಸ್ತಿ ಕೊಡಬೇಕಿತ್ತು. ಆದರೆ, ಪ್ರಶಸ್ತಿ ಪಡೆಯಲು ಅವರೂ ಹೋಗಿಲ್ಲ. ವಾಲ್ಮೀಕಿ ಸಮುದಾಯದವರುಇದರಿಂದ ಆಕ್ರೋಶಗೊಂಡಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಕ್ಷಮೆ ಕೇಳಲಿ’

ಹುಬ್ಬಳ್ಳಿ: ‘ಶಾಸಕ ಶ್ರೀರಾಮುಲು ಅವರಿಗೆ 371ಜೆ ಅಂದರೆ ಏನೆಂದು ಗೊತ್ತಿಲ್ಲ. ಅವರಿಗೆ ಗೊತ್ತಿರುವುದು 420 ಮಾತ್ರ ಎಂದು ಟೀಕಿಸುವ ಮೂಲಕ ಸಿದ್ದರಾಮಯ್ಯ ಅವರು, ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ತರಹದ ಮಾತುಗಳು ಅವರ ಘನತೆಗೆ ತಕ್ಕುದಲ್ಲ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT