ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಸಮಾಜದ ಒಂದೂ ಮತ ಬೇರೆಡೆ ಹೋಗಬಾರದು; ಬಿಎಸ್‌ವೈ

Last Updated 23 ನವೆಂಬರ್ 2019, 14:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಅಥಣಿ, ಕಾಗವಾಡ ಕ್ಷೇತ್ರದ ಶಿರಗುಪ್ಪಿ ಹಾಗೂ ಗೋಕಾಕದಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವೀರಶೈವ ಲಿಂಗಾಯತ ಮತಗಳ ಮೇಲೆಯೇ ಹೆಚ್ಚು ಗಮನ ಹರಿಸಿದ್ದರು.

ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ್ದ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸರ್ಕಾರ ಪೂರ್ಣಾವಧಿಯವರೆಗೆ ನಡೆಯಬೇಕಾದರೆ, ನನ್ನ ವೀರಶೈವ– ಲಿಂಗಾಯತ ಸಮುದಾಯದವರ ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು. ಯಾವುದೇ ವ್ಯಾಮೋಹಕ್ಕೆ ಬಲಿಯಾಗದೇ, ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು’ ಎಂದು ಮನವಿ ಮಾಡಿದರು.

‘ರಮೇಶ ಜಾರಕಿಹೊಳಿ ಅವರು 16 ಜನ ಅನರ್ಹ ಶಾಸಕರನ್ನು ಕಟ್ಟಿಕೊಂಡು ಹೋರಾಟ ಮಾಡದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಜಗದೀಶ ಶೆಟ್ಟರ್‌, ಶಶಿಕಲಾ ಜೊಲ್ಲೆ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ನಾವು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕಾಗಿದೆ’ ಎಂದು ಹಾಡಿ ಹೊಗಳಿದರು.

‘ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಅವರು ರಮೇಶ ಜಾರಕಿಹೊಳಿ ಗೆದ್ದು ಬಂದರೆ ಸಚಿವ ಸ್ಥಾನ ನೀಡಲಾಗುವುದು.ಡಿಸಿಎಂ ಲಕ್ಷ್ಮಣ ಸವದಿ ಅವರ ಸಚಿವ ಸ್ಥಾನವನ್ನೂ ಮುಂದುವರಿಸಲಾಗುವುದು’ ಎಂದು ಹೇಳಿದರು.

ಮುಸ್ಲಿಮರ ಬಗ್ಗೆ ಭೇದವಿಲ್ಲ: ‘ಹಿಂದೂ– ಮುಸ್ಲಿಮರೆಂದು ನಾನು ಭೇದಭಾವ ಮಾಡುವುದಿಲ್ಲ. ಇಬ್ಬರೂ ಒಂದೇ ತಾಯಿ ಮಕ್ಕಳಂತೆ ಕಾಣುತ್ತೇನೆ. ಯಾವುದೇ ಸಮಾಜದ ವಿರೋಧಿ ನಾನಲ್ಲ. ನಾನು ಮುಖ್ಯಮಂತ್ರಿಯಾಗಲು ಎಲ್ಲ ಸಮಾಜದವರು ಸಹಕರಿಸಿದ್ದಾರೆ’ ಎಂದು ಹೇಳಿದರು.

ಸಿದ್ದರಾಮಯ್ಯ ಒಬ್ಬಂಟಿ:ಅಥಣಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್‌. ಈಶ್ವರಪ್ಪ, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿರುವುದರಿಂದ ಮೂಲ ಕಾಂಗ್ರೆಸ್ಸಿಗರಾದ ಡಾ.ಜಿ.ಪರಮೇಶ್ವರ್‌. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಿದ್ದರಾಮಯ್ಯ ಅವರೊಬ್ಬರೇ ಉಪಚುನಾವಣೆ ಎದುರಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಸವದಿ ಆಣೆ: ‘ಅಥಣಿಯ ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಅಥಣಿ ಹಾಗೂ ಕಾಗವಾಡ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಇವರಿಬ್ಬರನ್ನೂ ವಿಧಾನಸಭೆಯ ಮೆಟ್ಟಿಲು ಹತ್ತಿಸುತ್ತೇನೆ’ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರಮಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT