ಗುರುವಾರ , ಮಾರ್ಚ್ 4, 2021
26 °C

ಜನತಾ ದರ್ಶನದಲ್ಲಿ ಅಳಲು; ಮಹಿಳೆ ಹೆಸರಿಗೆ ಫ್ಲ್ಯಾಟ್ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಫ್ಲ್ಯಾಟ್ ಕೊಡುವುದಾಗಿ ಹೇಳಿದ್ದ ವ್ಯಕ್ತಿಯೊಬ್ಬ, ₹60 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಮಧ್ಯಪ‍್ರದೇಶದ ವಂದನಾ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಜನತಾ ದರ್ಶನದಲ್ಲಿ ಅಳಲು ತೋಡಿಕೊಂಡ 24 ಗಂಟೆಯಲ್ಲೇ ಅವರ ಹೆಸರಿಗೆ ಫ್ಲ್ಯಾಟ್ ನೋಂದಣಿ ಮಾಡಿಸಲಾಗಿದೆ.

ಮಾರತ್ತಹಳ್ಳಿ ಬಳಿಯ ಪಣಂತ್ತೂರಿನಲ್ಲಿ ವಿಜಯಕುಮಾರ್ ಹಾಗೂ ವಿಜಯಪ್ರಕಾಶ್ ಚೌರಾಸಿಯಾ ಸಹೋದರರು, ‘ಚೌರಾಸಿಯಾ ಮ್ಯಾನರ್ ಫೇಸ್ –2’ ವಸತಿ ಸಮುಚ್ಚಯ ನಿರ್ಮಿಸಿದ್ದಾರೆ. ಅದರಲ್ಲೇ ಒಂದು ಫ್ಲ್ಯಾಟ್‌ ನೀಡುವುದಾಗಿ ಹೇಳಿದ್ದ ವಿಜಯಕುಮಾರ್, ಖಾಸಗಿ ಕಂಪನಿ ಉದ್ಯೋಗಿ ವಂದನಾ ಅವರಿಂದ ಜನವರಿಯಲ್ಲಿ ₹60 ಲಕ್ಷ ಪಡೆದುಕೊಂಡಿದ್ದರು. ಅವರ ಹೆಸರಿಗೆ ನೋಂದಣಿ ಮಾಡಿಸುವುದಾಗಿಯೂ ಭರವಸೆ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಹಣ ನೀಡಿ ತಿಂಗಳಾದರೂ ಮಹಿಳೆ ಹೆಸರಿಗೆ ಫ್ಲ್ಯಾಟ್ ನೋಂದಣಿ ಮಾಡಿಸಿರಲಿಲ್ಲ. ಅದನ್ನು ಪ್ರಶ್ನಿಸಿದರೆ, ಕೆಲವೇ ದಿನಗಳಲ್ಲಿ ನೋಂದಣಿ ಮಾಡಿಸುವುದಾಗಿ ಹೇಳುತ್ತಲೇ ದಿನದೂಡುತ್ತಿದ್ದರು. ಅದಾದ ಕೆಲವು ದಿನಗಳ ನಂತರ, ಆ ಫ್ಲ್ಯಾಟನ್ನು ಬೇರೊಬ್ಬರ ಹೆಸರಿಗೆ ನೋಂದಣಿ ಮಾಡಿಸಿದ್ದರು. ಅದು ಗೊತ್ತಾಗುತ್ತಿದ್ದಂತೆ ಮಹಿಳೆ, ಹೋಗಿ ವಿಚಾರಿಸಿದ್ದರು. ಅವರಿಗೇ ಆಗ ಜೀವ ಬೆದರಿಕೆ ಹಾಕಲಾಗಿತ್ತು ಎಂದು ವಿವರಿಸಿದರು.

ನೊಂದ ಮಹಿಳೆ, ಜನತಾ ದರ್ಶನಕ್ಕೆ ಹೋಗಿ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ‘ಮಹಿಳೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ’ ಎಂದು ನಗರ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ವಿಜಯಕುಮಾರ್‌ ಅವರನ್ನು ವಶಕ್ಕೆ ಪಡೆದಿದ್ದ ಮಾರತ್ತಹಳ್ಳಿ ಪೊಲೀಸರು, ಮೊದಲ ನೋಂದಣಿಯನ್ನು ರದ್ದುಪಡಿಸಿ ಮಹಿಳೆ ಹೆಸರಿಗೆ ಫ್ಲ್ಯಾಟ್‌ ಮರು ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹದ್, ‘ಮುಖ್ಯಮಂತ್ರಿ ಹಾಗೂ ಕಮಿಷನರ್ ಸೂಚನೆಯಂತೆ ಫ್ಲ್ಯಾಟ್‌ ನೋಂದಣಿ ಮಾಡಿಸಲಾಗಿದೆ. ವಿಜಯಕುಮಾರ್‌ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದು, ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು