ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಿಂದ ಬಿಜೆಪಿ–ಟಿಡಿಪಿ ಮಧ್ಯೆ ಬಿರುಕು

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ದಕ್ಷಿಣ ಭಾರತದಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಮಿತ್ರಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಕೇಂದ್ರ ಸರ್ಕಾರದ 2018–19ನೇ ಸಾಲಿನ ಬಜೆಟ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಬರುವ ಬಗ್ಗೆಯೂ ಚಿಂತನೆ ನಡೆದಿದೆ. ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಏನೂ ಸಿಕ್ಕಿಲ್ಲ ಎಂಬುದು ಈ ಅಸಮಾಧಾನಕ್ಕೆ ಕಾರಣ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪಕ್ಷದ ಸಂಸದರ ಜತೆ ಭಾನುವಾರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯದ ಆರ್ಥಿಕ ದುಸ್ಥಿತಿಯ ಬಗ್ಗೆ ಅವರು ಚರ್ಚಿಸಲಿದ್ದಾರೆ.

ಎನ್‌ಡಿಎಯಿಂದ ಹೊರಗೆ ಬರುವುದಲ್ಲದೆ ಟಿಡಿಪಿಗೆ ಬೇರೆ ಆಯ್ಕೆ ಇಲ್ಲ. ಆದರೆ ಬೇರೆ ಯಾವುದೇ ದಾರಿ ಇಲ್ಲ ಎಂದಾದರೆ ಮಾತ್ರ ಪಕ್ಷ ಈ ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ಸಂಸದ ಟಿ.ಜಿ. ವೆಂಕಟೇಶ್‌ ದೆಹಲಿಯಲ್ಲಿ ಹೇಳಿದ್ದಾರೆ. ‘ಮೊದಲನೆಯದಾಗಿ, ಕೇಂದ್ರ ಸಂಪುಟದಲ್ಲಿರುವ ಟಿಡಿಪಿ ಸಚಿವರು ರಾಜೀನಾಮೆ ನೀಡಲಿದ್ದಾರೆ. ಸದನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದರಿಂದ ಯಾವುದೇ ಪ್ರಯೋಜನ ಆಗದಿದ್ದರೆ ಮಾತ್ರ ಮೈತ್ರಿಕೂಟದಿಂದ ಹೊರನಡೆಯಲಾಗುವುದು’ ಎಂದು ವೆಂಕಟೇಶ್‌ ತಿಳಿಸಿದ್ದಾರೆ.

ಪೋಲಾವರಂ ಯೋಜನೆ ಮತ್ತು ಹೊಸ ರಾಜಧಾನಿ ಅಮರಾವತಿ ನಿರ್ಮಾಣ ಪೂರ್ಣಗೊಳ್ಳುವವರೆಗೆ ಆಂಧ್ರ ಪ್ರದೇಶಕ್ಕೆ ಕೇಂದ್ರದ ಹೆಚ್ಚಿನ ನೆರವು, ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌ ಮತ್ತು ವಿಶಾಖಪಟ್ಟಣವನ್ನು ಕೇಂದ್ರವಾಗಿಸಿ ಹೊಸ ರೈಲ್ವೆ ವಲಯ ಸ್ಥಾಪನೆಯಂತಹ ಭರವಸೆಗಳನ್ನು ಎನ್‌ಡಿಎ ನೀಡಿತ್ತು. ಈ  ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ನಾಯ್ಡು ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಹಾಗಾಗಿ, ನಾಯ್ಡು ಅವರು ಸಂಸದರ ಜತೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ನಾಯ್ಡು ಅವರೇ ತಿಂಗಳ ಹಿಂದೆ ಭೇಟಿಯಾಗಿ ರಾಜ್ಯದ ಬೇಡಿಕೆಗಳನ್ನು ಪುನರುಚ್ಚರಿಸಿದ್ದರು. ಅದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ ಎಂಬುದು ನಾಯ್ಡು ನಿರಾಶೆಗೆ ಕಾರಣವಾಗಿದೆ. ‘ಆಂಧ್ರ ಪ್ರದೇಶದ ಮುಂದಿನ ದಾರಿಯ ಬಗ್ಗೆ ಯಾವುದೇ ಚಿಂತನೆ ಇಲ್ಲದೆ ರಾಜ್ಯವನ್ನು ಕಾಂಗ್ರೆಸ್‌ ಪಕ್ಷ ವಿಭಜಿಸಿತು. ಹಾಗಾಗಿ ಎನ್‌ಡಿಎ ಆಶ್ರಯ ಪಡೆಯುವುದು ನಮಗೆ ಅನಿವಾರ್ಯವಾಗಿತ್ತು. ಎನ್‌ಡಿಎಯಿಂದ ಸಹಾಯ ದೊರೆಯಬಹುದು ಎಂಬ ನಿರೀಕ್ಷೆ ನಮಗೆ ಇತ್ತು’ ಎಂದು ಸಂಸದರ ಜತೆ ನಡೆಸಿದ ಚರ್ಚೆಯ ವೇಳೆ ನಾಯ್ಡು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಮತ್ತು ಟಿಡಿಪಿ ಸಂಬಂಧದಲ್ಲಿ ಈಗಾಗಲೇ ಸಣ್ಣಮಟ್ಟದ ಬಿರುಕು ಕಾಣಿಸಿಕೊಂಡಿತ್ತು. ಬಜೆಟ್‌ನಿಂದಾಗಿ ಅದು ಇನ್ನಷ್ಟು ಹೆಚ್ಚಿದೆ. ‌

ಬಜೆಟ್‌ ಅನುದಾನಗಳು ಬಿಜೆಪಿಯ ನಿಲುವನ್ನು ಎತ್ತಿ ತೋರಿಸಿದೆ ಎಂದು ಎಡಪಕ್ಷಗಳು ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಆರೋಪಿಸಿವೆ.

‘ಕೇಂದ್ರ ಬಜೆಟ್‌ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳಿಗೆ ನೀಡುವ ಅನುದಾನಕ್ಕೆ ಸಂಬಂಧಿಸಿ ಕೇಂದ್ರವನ್ನು ದೂಷಿಸಿ ಪ್ರಯೋಜನವಿಲ್ಲ’ ಎಂದು ಬಿಜೆಪಿ ನಾಯಕಿ ಡಿ. ಪುರಂದೇಶ್ವರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT