ಮಂಗಳವಾರ, ಜೂನ್ 2, 2020
27 °C
ಹೊರರಾಜ್ಯ, ವಿದೇಶಗಳಿಂದ ಬರುವವರು ತಕ್ಷಣ ಅವರವರ ಊರಿಗೆ ತೆರಳುವಂತಿಲ್ಲ

ಹೊರಗಿನಿಂದ ಬರುವವರಿಗೆ ಆನ್‌ಲೈನ್‌ ನೋಂದಣಿ, ಕ್ವಾರಂಟೈನ್‌ ಕಡ್ಡಾಯ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊರರಾಜ್ಯಗಳಿಂದ ಮತ್ತು ವಿದೇಶಗಳಿಂದ ತಾಯ್ನಾಡಿಗೆ ಬರುವವರು ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಬೇಕು. ಅಲ್ಲದೆ, ಬಂದವರೆಲ್ಲರೂ 14 ದಿನ ಕ್ವಾರಂಟೈನ್‌ ಆಗಲೇಬೇಕು ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿದೆ.

ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾನುವಾರ ಸಭೆ ನಡೆಸಿದರು.

ಬೇರೆ ಬೇರೆ ದೇಶಗಳಿಂದ ಮತ್ತು ರಾಜ್ಯಗಳಿಂದ ಕನ್ನಡಿಗರು ವಾಪಸಾಗುತ್ತಿದ್ದು, ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.

’ಹೊರ ರಾಜ್ಯಗಳಿಂದ ಬರುವ ಕನ್ನಡಿಗರು‌ ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು. ಅಂಥವರನ್ನು ಕ್ವಾರಂಟೈನ್‌ ಸೌಲಭ್ಯಕ್ಕೆ ಅನುಗುಣವಾಗಿ ಕರೆಸಿಕೊಳ್ಳಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.

‘ರಾಜ್ಯದಿಂದ ಅನಿವಾರ್ಯವಾಗಿ ಹೊರ ಹೋಗಿ ಸಿಲುಕಿಕೊಂಡಿರುವವರನ್ನು ಮಾತ್ರ ವಾಪಸು ಕರೆದುಕೊಂಡು ಬರಬೇಕು. ಹೀಗೆ ಬರುವವರು ಎಲ್ಲಿಗೆ ಬರುತ್ತೇವೆ ಮತ್ತು ಯಾವಾಗ ಬರುತ್ತೇವೆ ಎಂಬುವುದನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. 14 ದಿನ‌ ಕ್ವಾರಂಟೈನ್‌ ಅವಧಿ ಮುಗಿಯದೆ ಯಾರೂ ಅವರವರ ಊರಿಗೆ ಹೋಗುವಂತಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಹೀಗಾಗಿ, ಕ್ವಾರಂಟೈನ್‌ನಲ್ಲಿ ಇರಲು ಸಿದ್ಧರಿರುವವರು ಮಾತ್ರ ನೊಂದಣಿ‌ ಮಾಡಿಕೊಳ್ಳಬೇಕು. ಬೇರೆ ರಾಜ್ಯದಲ್ಲಿ ಕೋವಿಡ್ ತಪಾಸಣೆ ಮಾಡಿಸಿದ್ದರೂ ಇಲ್ಲಿಯೂ ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಬೇಕು. ಹೊರ ರಾಜ್ಯಗಳಿಂದ ರೈಲುಗಳಲ್ಲಿ ಬರುವವರ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ’ ಎಂದು ಅವರು ತಿಳಿಸಿದರು.

‘ಇನ್ನು‌ ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೊ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಬೇಕು. ಅದೇ ರೀತಿ ರಾಜ್ಯದಲ್ಲಿ ಮೃತಪಟ್ಟರೆ, ಆ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು’ ಎಂದೂ ಮುಖ್ಯಮಂತ್ರಿ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು