ಸರ್ಕಾರಿ ಬಂಗಲೆಗೆ ಸಚಿವರ ಮಧ್ಯೆ ಪೈಪೋಟಿ?

7
ಒಂದೇ ಬಂಗಲೆ ಮೇಲೆ 2–3 ಸಚಿವರ ಕಣ್ಣು lಮುಖ್ಯಮಂತ್ರಿಗೆ ತಲೆನೋವಾದ ಬೇಡಿಕೆ

ಸರ್ಕಾರಿ ಬಂಗಲೆಗೆ ಸಚಿವರ ಮಧ್ಯೆ ಪೈಪೋಟಿ?

Published:
Updated:
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಕೆಲವು ನಿರ್ದಿಷ್ಟ ಸರ್ಕಾರಿ ಬಂಗಲೆಗಳನ್ನು ಪಡೆದುಕೊಳ್ಳಲು ಸಚಿವರ ಮಧ್ಯೆ ಭಾರಿ ಪೈಪೋಟಿ ಆರಂಭವಾಗಿದೆ. ಒಂದೇ ಬಂಗಲೆಯ ಮೇಲೆ 2–3 ಸಚಿವರು ಕಣ್ಣು ಹಾಕಿದ್ದಾರೆ.

ಕೆಲವು ಸಚಿವರು ತಮಗೆ ಈ ಬಂಗಲೆಯನ್ನೇ ಕೊಡಬೇಕೆಂದು ಪಟ್ಟು ಹಿಡಿದಿರುವುದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಬಂಗಲೆ ಹಂಚಿಕೆ ದೊಡ್ಡ ಕಗ್ಗಂಟಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿದ್ದ ‘ಕಾವೇರಿ’ ನಿವಾಸದ ಮೇಲೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರ ಕಣ್ಣು ಬಿದ್ದಿದೆ. ‘ಕಾವೇರಿ’ಯನ್ನು ತಮಗೆ ನೀಡುವಂತೆ ಅವರು ಈಗಾಗಲೇ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿದ್ದ ಎಚ್.ಕೆ. ಪಾಟೀಲ ವಾಸವಿದ್ದ ಕ್ರೆಸೆಂಟ್ ರಸ್ತೆಯಲ್ಲಿರುವ ನಂ. 3 ಬಂಗಲೆ ಪಡೆಯಲು ನಾಲ್ಕಕ್ಕೂ ಹೆಚ್ಚು ಸಚಿವರ ಮಧ್ಯೆ ಸ್ಪರ್ಧೆ ಉಂಟಾಗಿದೆ. ಪಾಟೀಲರು ಈ ಮನೆಯನ್ನು ಖಾಲಿ ಮಾಡಿದ್ದಾರೆ.

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಶಿವಶಂಕರ ರೆಡ್ಡಿ ಇದನ್ನು ಪಡೆಯಲು ಅಪೇಕ್ಷಿಸಿದ್ದಾರೆ ಎಂದೂ ಹೇಳಲಾಗಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂವ್ ಕಾಟೇಜ್ ನಂ. 2 ಅನ್ನು ಕೇಳಿದ್ದಾರೆ. ಈ ಬಂಗಲೆ ತಮಗೆ ನೀಡುವಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಪಟ್ಟು ಹಿಡಿದಿದ್ದಾರೆ. ಇದೇ ಬಂಗಲೆ ಪಡೆಯಲುಕೃಷ್ಣ ಬೈರೇಗೌಡ ಕೂಡಾ ಒಲವು ತೋರಿಸಿದ್ದಾರೆ. ಸಪ್ತ ಸಚಿವರ ನಿವಾಸ ಸಂಖ್ಯೆ –3 ಪಡೆದುಕೊಳ್ಳಲು ಕಾರ್ಮಿಕ ಸಚಿವ ವೆಂಕಟರಮಣಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !