ಶುಕ್ರವಾರ, ಡಿಸೆಂಬರ್ 13, 2019
26 °C

ಉಪ ಚುನಾವಣೆ ಬಳಿಕ ಮೈತ್ರಿ ಸರ್ಕಾರ: ಎಸ್‌.ಆರ್.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಉಪ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸರ್ಕಾರ ರಚನೆಗೆ ಎಲ್ಲ ಬಾಗಿಲುಗಳು ಮುಕ್ತ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಈಗಾಗಲೇ ಹೇಳಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

‘ಉಪ ಚುನಾವಣೆಯಲ್ಲಿ ವಿಧಾನಸಭಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎನ್ನುವುದು ಬಿಜೆಪಿಯವರ ಕಲ್ಪನೆ. ಎಲ್ಲರೂ ಒಂದೆಕಡೆ ಪ್ರಚಾರಕ್ಕೆ ಹೋದರೆ ಎಲ್ಲ ಕ್ಷೇತ್ರಗಳನ್ನು ಸುತ್ತುವುದು ಕಷ್ಟವಾದ್ದರಿಂದ ಕೆಲವೆಡೆ ಸಿದ್ದರಾಮಯ್ಯ ಒಬ್ಬರೇ ಹೋಗಿದ್ದಾರೆ. ಹಾಗೆಂದು ಅವರು ಒಬ್ಬಂಟಿ ಅಲ್ಲ’ ಎಂದರು.

‘ಉಪ ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂಬುದು ಈಗಾಗಲೇ ಗುಪ್ತಚರ ವರದಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೊತ್ತಾಗಿದೆ.ತಮಗೆ ಬಹುಮತ ದೊರೆಯುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿದೆ. ಎಲ್ಲ ಊಹಾಪೋಹಗಳು ಡಿಸೆಂಬರ್ 9ಕ್ಕೆ ಅಂತ್ಯವಾಗುತ್ತವೆ. ನಿಶ್ಚಿತವಾಗಿ ಮೈತ್ರಿ ಸರ್ಕಾರ ರಚನೆಯಾಗುವ ಲಕ್ಷಣ ಗೋಚರಿಸುತ್ತಿವೆ’ ಎಂದರು.

‘ಮತದಾರರೇ ನಿಜವಾದ ತೀರ್ಪುದಾರರು. ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬಹಳ ಜಾಣರು. ಅನರ್ಹರನ್ನು ಜನತಾ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ. ಜೊತೆಗೆ ಅವರಿಗೆ ಅನರ್ಹರು ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಅನರ್ಹರಿಗೆ ಮತದಾರರೇ ಪಾಠ ಕಲಿಸುತ್ತಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು