ವರಿಷ್ಠರ ಜೊತೆ ದಿನೇಶ್ ಇಂದು ಚರ್ಚೆ

ಬೆಂಗಳೂರು: ಲೋಕಸಭೆ ಕ್ಷೇತ್ರವಾರು ರಾಜಕೀಯ ಸ್ಥಿತಿಗತಿಯ ಕುರಿತು ಪ್ರಮುಖರ ಜೊತೆ ಇತ್ತೀಚೆಗೆ ಸಭೆ ನಡೆಸಿದ ಬಳಿಕ ಸಿದ್ಧಪಡಿಸಿರುವ ವರದಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ವರಿಷ್ಠರ ಜೊತೆ ಗುರುವಾರ ದೆಹಲಿಯಲ್ಲಿ ವಿಚಾರ ವಿನಿಮಯ ನಡೆಸಲಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ, ಜೆಡಿಎಸ್ ಜೊತೆಗಿನ ಮೈತ್ರಿ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆ ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದ ಒಳಗೆ ಅಂತಿಮಗೊಳಿಸುವ ಬಗ್ಗೆ ಈಗಾಗಲೇ ದಿನೇಶ್ ಸುಳಿವು ನೀಡಿದ್ದಾರೆ.
ಪ್ರತಿ ಜಿಲ್ಲೆಯ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಪ್ರತಿ ಕ್ಷೇತ್ರಗಳ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ. ಕ್ಷೇತ್ರವಾರು ಸರ್ವೆ ನಡೆಸಿ ಜನಾಭಿಪ್ರಾಯ ಪಡೆದ ಬಳಿಕ ಹೆಸರು ಅಂತಿಮಗೊಳಿಸಲು ಪಕ್ಷದ ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
‘2014ರ ಚುನಾವಣೆಯಲ್ಲಿ ಅಭ್ಯರ್ಥಿ ಘೋಷಿಸಲು ವಿಳಂಬವಾದ ಕಾರಣ 2-3 ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಕೆಲವು ಕ್ಷೇತ್ರಗಳಲ್ಲಿ ಮೋದಿ ಅಲೆ ಇದ್ದುದರಿಂದ ಗೆಲ್ಲಲು ಸಾಧ್ಯವಾಗಿಲ್ಲ’ ಎಂದು ಅಭಿಪ್ರಾಯಪಟ್ಟಿರುವ ಪಕ್ಷದ ನಾಯಕರು, ಈ ಬಾರಿ ಅದಕ್ಕೆ ಅವಕಾಶ ಇಲ್ಲದಂತೆ ಕಾರ್ಯತಂತ್ರ ರೂಪಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಸಭೆ ಗುರುವಾರ ದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲಿರುವ ದಿನೇಶ್, ಸದ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.