ಬೀದಿಗಿಳಿದು ‘ಮೈತ್ರಿ’ ಪ್ರತಿಭಟನೆ | ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ’

ಶುಕ್ರವಾರ, ಜೂಲೈ 19, 2019
26 °C
ಪ್ರತಿಭಟನೆ ನಡೆಸಿದ ಕಾಂಗ್ರೆಸ್– ಜೆಡಿಎಸ್ , ಶಾ, ಮೋದಿ ವಿರುದ್ಧ ದೇವೇಗೌಡ ಟೀಕಾಪ್ರಹಾರ

ಬೀದಿಗಿಳಿದು ‘ಮೈತ್ರಿ’ ಪ್ರತಿಭಟನೆ | ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ’

Published:
Updated:
Prajavani

ಬೆಂಗಳೂರು: ಮೈತ್ರಿ ಸರ್ಕಾರವನ್ನು ಬಿಜೆಪಿ ಮುಖಂಡರು ಅಸ್ಥಿರಗೊಳಿಸಿದ್ದಾರೆ ಎಂದು ಆರೋಪಿಸಿ ಸಿಡಿದೆದ್ದಿರುವ ಕಾಂಗ್ರೆಸ್, ಜೆಡಿಎಸ್ ಮುಖಂಡರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯ ಸೇರಿದಂತೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುಡುಗಿದರು.

‘ಮೈತ್ರಿ ಪಕ್ಷಗಳ ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸಿ, ಸರ್ಕಾರ ಅಸ್ಥಿರಗೊಳಿಸಲಾಗಿದೆ. ಆಮಿಷಕ್ಕೆ ಒಳಗಾಗಿ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷರ ಮೇಲೆ ಬಿಜೆಪಿ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ರಾಜ್ಯಪಾಲರ ಮೂಲಕವೂ
ವಿಧಾನಸಭಾಧ್ಯಕ್ಷರ ಮೇಲೆ ಒತ್ತಡ ತರಲಾಗುತ್ತಿದೆ’ ಎಂದು ಎರಡೂ ಪಕ್ಷಗಳ ಮುಖಂಡರು ಆರೋಪಿಸಿದರು.

ಕಬ್ಬನ್‌ಪಾರ್ಕ್ ಮೆಟ್ರೋ ರೈಲು ನಿಲ್ದಾಣದ ಬಳಿಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್– ಜೆಡಿಎಸ್ ಮುಖಂಡರು ರಾಜಭವನ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದು, ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ. 60 ವರ್ಷಗಳ ರಾಜಕಾರಣದಲ್ಲಿ ಇಂಥ ಕೆಟ್ಟ ರಾಜಕೀಯ ಸ್ಥಿತಿ ನೋಡಿರಲಿಲ್ಲ. ಸ್ವಚ್ಛ ಭಾರತ, ಸ್ವಚ್ಛ ಚುನಾವಣೆ ಎಂದು ಹೇಳಿದ ಮೋದಿ, ಈಗ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿಯೇತರ ಸರ್ಕಾರಗಳಿದ್ದ 17 ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಅಮಿತ್ ಶಾ, ನರೇಂದ್ರ ಮೋದಿ ಅವರು ಈಗ ರಾಜ್ಯ ಸರ್ಕಾರ ಅಸ್ಥಿರಗೊಳಿಸಿದ್ದಾರೆ. ಈ ಇಬ್ಬರು ನಾಯಕರಿಗೆ ಇನ್ನೂ ತೃಪ್ತಿಯಾದಂತೆ ಕಾಣುತ್ತಿಲ್ಲ. ಶಾಸಕರನ್ನು ಹೆದರಿಸಿ, ಬೆದರಿಸಿ ರಾಜೀನಾಮೆ ಕೊಡಿಸಿ, ಬಲವಂತವಾಗಿ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಗಿದೆ’ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ, ನರೇಂದ್ರ ಮೋದಿ ಲಜ್ಜೆಗೆಟ್ಟವರು. ಇವರ ಕುತಂತ್ರ ರಾಜಕಾರಣದ ಬಣ್ಣ ಬಯಲಾಗಿದೆ’ ಎಂದರು.

‘ಶಾಸಕರ ಖರೀದಿಯಲ್ಲಿ ತೊಡಗಿರುವ ಯಡಿಯೂರಪ್ಪ ಅವರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಸಾರ್ವಜನಿಕವಾಗಿ ಅವರನ್ನು ಓಡಾಡಲು ಪಕ್ಷದ ಕಾರ್ಯಕರ್ತರು ಬಿಡುವುದಿಲ್ಲ. ಜನರ ನಡುವೆ ಓಡಾಡದಂತೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಎಐಸಿಸಿ ಮುಖಂಡ ಗುಲಾಂನಬಿ ಆಜಾದ್, ‘ಬಿಜೆಪಿ ಆಡಳಿತದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಆತಂಕಕ್ಕೆ ಒಳಗಾಗಿದೆ. ಕುದುರೆ ವ್ಯಾಪಾರ ಜೋರಾಗಿದೆ. ಇದೆಲ್ಲವನ್ನೂ ಜನರು ಗಮನಿಸುತ್ತಿದ್ದು, ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಉಪಸ್ಥಿತರಿದ್ದರು.

 * ಪ್ರತಿಯೊಬ್ಬ ಶಾಸಕರ ಖರೀದಿಗೆ ₹25–30 ಕೋಟಿ ನೀಡಲಾಗುತ್ತಿದೆ

-ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !