ಪಕ್ಷವಿರೋಧಿ ಚಟುವಟಿಕೆ| ಕಾಂಗ್ರೆಸ್‌ನಿಂದ ಶಾಸಕ ರೋಷನ್‌ ಬೇಗ್‌ ಅಮಾನತು

ಬುಧವಾರ, ಜೂಲೈ 17, 2019
25 °C

ಪಕ್ಷವಿರೋಧಿ ಚಟುವಟಿಕೆ| ಕಾಂಗ್ರೆಸ್‌ನಿಂದ ಶಾಸಕ ರೋಷನ್‌ ಬೇಗ್‌ ಅಮಾನತು

Published:
Updated:

ಬೆಂಗಳೂರು: ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಶಾಸಕ ರೋಷನ್‌ ಬೇಗ್‌ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಎಐಸಿಸಿ ಈ ತೀರ್ಮಾ ಕೈಗೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಶಾಸಕ ರೋಷನ್‌ ಬೇಗ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಸಲ್ಲಿಸಿದ್ದ ಪ್ರಸ್ತಾವವನ್ನು ಮಾನ್ಯ ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಐಎಂಎ ಬಹುಕೋಟಿ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದಿತ್ತು. ‘ಐಎಂಎ ಸಂಸ್ಥೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಂದಲೂ ಹಣ ಪಡೆದಿಲ್ಲ’ ಎಂದು ಆರೋಪ ಕೇಳಿಬಂದ ನಂತರ ಬೇಗ್ ಸ್ಪಷ್ಟನೆ ನೀಡಿದ್ದರು.

‘ಐಎಂಎ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಬ್ಯಾಂಕ್‌ನಿಂದ ₹600 ಕೋಟಿ ಸಾಲ ಪಡೆಯಲು ಎನ್‌ಒಸಿ ನೀಡಬೇಕು. ಇದಕ್ಕಾಗಿ ಸಹಾಯ ಮಾಡುವಂತೆ ಮನ್ಸೂರ್‌ ಖಾನ್‌ ಕಳೆದ ತಿಂಗಳು ಶಾಸಕ ರೋಷನ್‌ಬೇಗ್‌ ಜತೆಗೆ ಬಂದು ಮನವಿ ಮಾಡಿದ್ದರು’ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು.

ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇತರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಕ್ಷದ ಸೋಲಿಗೆ ಈ ಮುಖಂಡರೇ ಕಾರಣ ಎಂದು ಟೀಕಿಸಿದ್ದರು.

ಮುಖಂಡರನ್ನು ಟೀಕಿಸಿದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರ ನೀಡುವುದಿಲ್ಲ ಎಂದು ಬೇಗ್ ಪ್ರತ್ಯುತ್ತರ ನೀಡಿದ್ದರು. ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಐಸಿಸಿ ವರಿಷ್ಠರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವರದಿ ಸಲ್ಲಿಸಿದ್ದರು.

ಐಎಂಎ ಪ್ರಕರಣದ ಹಿನ್ನೆಲೆಯನ್ನೂ ಆಧಾರವಾಗಿ ಇಟ್ಟುಕೊಂಡು ವರಿಷ್ಠರಿಗೆ ಮತ್ತೊಮ್ಮೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಕೋರಲಾಗುವುದು ಎಂದು ದಿನೇಶ್ ಮಂಗಳವಾರ ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ರಾತ್ರಿ ವೇಳೆಗೆ ಅಮಾನತು ಆದೇಶ ಹೊರಬಿದ್ದಿದೆ. ಪ್ರತಿಕ್ರಿಯೆ ಪಡೆಯಲು ಬೇಗ್ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !