ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ‘ಚಕ್ರವ್ಯೂಹ’ಕ್ಕೆ ಸಿಲುಕಿದ ರೈತ

ಹೊಲದಲ್ಲೇ ಕೊಳೆಯುತ್ತಿದೆ ಬೆಳೆ: ರೈತರ ಫಸಲಿಗೆ ಸಿಗದ ಬೆಲೆ
Last Updated 12 ಏಪ್ರಿಲ್ 2020, 0:56 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಪ್ರಸರಣ ತಡೆಯಲು ವಿಧಿಸಿರುವ ನಿರ್ಬಂಧ, ಮಾರುಕಟ್ಟೆ ಬಂದ್‌ನಿಂದಾಗಿ ನಾಡಿನ ಅನ್ನದಾತ ‘ಚಕ್ರವ್ಯೂಹ’ದಲ್ಲಿ ಸಿಕ್ಕಿ ನಲುಗುತ್ತಿದ್ದಾನೆ.

ಆಹಾರ ಧಾನ್ಯ, ತರಕಾರಿ, ಹಣ್ಣು, ವಾಣಿಜ್ಯ ಬೆಳೆಗಳು ಕಟಾವಿಗೆ ಬರುವ ಹೊತ್ತಿನಲ್ಲಿ ಕೊರೊನಾ ವಕ್ಕರಿಸಿದ್ದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳೆದ ಬೆಳೆಯನ್ನು ಸಾಗಿಸಲು ಮುಕ್ತ ಅವಕಾಶ ನೀಡಲಾಗುವುದು. ಎಲ್ಲಿಯೂ ತಡೆಯೊಡ್ಡಬಾರದು ಎಂದು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು, ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಹಾಗೂ ರೈತರಿಗಾಗಿಯೇ ಗ್ರೀನ್ ಪಾಸ್ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ, ಅನೇಕ ಕಡೆಗಳಲ್ಲಿ ಅತ್ತಿಂದಿತ್ತ ಅಲೆದಾಡುವ ಅವಕಾಶ ಇಲ್ಲ ಎಂದು ರೈತರು ದೂರುತ್ತಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯೊಳಗೆ ತರಕಾರಿ, ಹಣ್ಣು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಜಿಲ್ಲೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆಯುವುದಕ್ಕಿಂತ ತರಕಾರಿಯನ್ನೇ ಬೆಳೆಯದ ಜಿಲ್ಲೆಗಳ ಮಾರುಕಟ್ಟೆ ಅವಲಂಬಿಸಿದ್ದರು. ದಕ್ಷಿಣ
ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಾಗಿಸಲು ಹಳೆ ಮೈಸೂರು ಭಾಗದ ರೈತರು ಪರದಾಡುವ ಪರಿಸ್ಥಿತಿ ಇದೆ. ಅಂತರರಾಜ್ಯ ಮಾರುಕಟ್ಟೆ ನಂಬಿ, ಹಣ್ಣು, ತರಕಾರಿ ಬೆಳೆದ ರೈತರು ಕಂಗಾಲಾಗಿದ್ದಾರೆ.

ಅಪಪ್ರಚಾರದ ಕೇಡು

‘ಮುಸ್ಲಿಮರು ಕೊರೊನಾ ಹರಡುತ್ತಿದ್ದಾರೆ’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಅಪಪ್ರಚಾರ ಮಾಡಿದ್ದರು. ರೈತರ ಹೊಲಗಳಿಂದಲೇ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಾಪಾರಿಗಳು ಈಗ ಹಳ್ಳಿಗಳ ಕಡೆ ಮುಖ ಹಾಕುತ್ತಿಲ್ಲ. ಇದು ರೈತರಿಗೆ ಶಾಪವಾಗಿದೆ ಎಂಬ ಟೀಕೆಯೂ ರೈತ ಸಂಘಟನೆಗಳದ್ದಾಗಿದೆ.

ಆತುರಕ್ಕೆ ಬೀಳಬೇಡಿ: ಸಚಿವ ಪಾಟೀಲ

‘ಕೈಮುಗಿದುಕೇಳಿಕೊಳ್ಳುತ್ತೇನೆ. ರೈತರುಆತುರಕ್ಕೆ ಬಿದ್ದು ಹಣ್ಣು, ತರಕಾರಿ ನಾಶ ಮಾಡಬಾರದು. ಸಾಗಣೆ, ರೈತರ ಓಡಾಟಕ್ಕೆ ಗ್ರೀನ್‌ ಪಾಸ್‌ ನೀಡಲು ವ್ಯವಸ್ಥೆ ಮಾಡಿದ್ದೇನೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

’ರೈತರು ತಾವು ಬೆಳೆದ ಹಣ್ಣು, ತರಕಾರಿ ನಾಶ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬೆಳೆ ನಷ್ಟ ಸಂಬಂಧ ಸಮೀಕ್ಷೆ ನಡೆಸಿ, ಲಾಕ್‌ಡೌನ್‌ ಬಳಿಕ ಪರಿಹಾರ ನೀಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT