ಶುಕ್ರವಾರ, ಜೂನ್ 5, 2020
27 °C

ಕೊರೊನಾ ಜಾಗೃತಿಗೆ ಸಂಚಾರಿ ರೇಡಿಯೊ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರಿ ರೇಡಿಯೊ ಕೇಂದ್ರ

ನಗರ, ಪಟ್ಟಣಗಳಲ್ಲಿ ಕೊರೊನಾ ವಿರುದ್ಧ ವಿವಿಧ ಸಂಘಟನೆಗಳು ಸೇರಿ ಜಾಗೃತಿ ಮೂಡಿಸುತ್ತಿವೆ. ತುರುವೆಕರೆ ತಾಲ್ಲೂಕಿನ ಹಳ್ಳಿಗಳಲ್ಲಿ ಇಂಥ ಸಂಘಟನೆಗಳ ಜತೆಗೆ 'ಸಂಚಾರಿ ರೇಡಿಯೊ ಕೇಂದ್ರ'ವೂ ಜತೆಯಾಯಿತು..

ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ದಾದಿಯರು, ಪೊಲೀಸ್ ಸಿಬ್ಬಂದಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಆದರೆ, ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿರುವ ರೆಡ್‍ಕ್ರಾಸ್ ಘಟಕ, ಇಂಥ ‘ವಾರಿಯರ್ಸ್’ ಸಹಯೋಗದ ಜತೆಗೆ ‘ನಮ್ ಹಳ್ಳಿ ರೇಡಿಯೊ’ ಎಂಬ ಸಂಚಾರಿ ರೇಡಿಯೊ ಕೇಂದ್ರವನ್ನೂ ಬಳಸಿಕೊಂಡು, ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಿತು. ಜತೆಗೆ, ಜನರ ಸಂಕಷ್ಟಕ್ಕೂ ಸ್ಪಂದಿಸಿತು.

‘ನಮ್‌ ಹಳ್ಳಿ ರೇಡಿಯೊ’– ಇದೊಂದು ಸಂಚಾರಿ ರೇಡಿಯೊ ಕೇಂದ್ರ. ನೊಣವಿನಕೆರೆಯ ಎಂ.ಪಿ.ಗಿರೀಶ್ ಇದನ್ನು ರೂಪಿಸಿದ್ದಾರೆ. ಒಂದು ವ್ಯಾನ್‌ನಲ್ಲಿ ಕಂಪ್ಯೂಟರ್, ರೆಕಾರ್ಡರ್, ಮೈಕ್, ಆಂಪ್ಲಿಫೈಯರ್ಸ್‌ನಂತಹ ಉಪಕರಣಗಳನ್ನು ಜೋಡಿಸಿ, ಕಡಿಮೆ ವೆಚ್ಚದಲ್ಲಿ ಪುಟ್ಟ ರೇಡಿಯೊ ಕೇಂದ್ರವನ್ನೇ ಜೋಡಿಸಿದ್ದಾರೆ. ವ್ಯಾನ್ ಸುತ್ತ ಸ್ಪೀಕರ್‌ಗಳಿವೆ. ಇಂಟರ್‌ನೆಟ್‌ ಬಳಸಿ, ವೈಫೈ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ವ್ಯಾನ್ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ರೇಡಿಯೊ ಕಾರ್ಯಕ್ರಮ ಪ್ರಸಾರವಾಗುವಂತಹ ವ್ಯವಸ್ಥೆ ಅಳವಡಿಸಿದ್ದಾರೆ ಗಿರೀಶ್.

ಈ ರೇಡಿಯೊ ಕೇಂದ್ರ ಹಳ್ಳಿಗಳಲ್ಲಿ ಸುತ್ತಾಡುತ್ತಾ ‘ಕೊರೊನಾ ಜಾಗೃತಿ ಮಾಹಿತಿಗಳನ್ನು’ ಬಿತ್ತರಿಸುತ್ತದೆ. ಜನರು ಮನೆಯಲ್ಲಿ ಕುಳಿತುಕೊಂಡೇ, ತಮ್ಮ ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ‘ನಮ್ದೂ ಒಂದು ರೇಡಿಯೊ’ ಹಾಟ್‌ಸ್ಪಾಟ್ ಬಳಸಿ ಜಾಲತಾಣದ ಮೂಲಕ ಇಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳುತ್ತಾರೆ (ಈ ಮೊದಲು ಮೊಬೈಲ್‌ನಲ್ಲಿ ರೇಡಿಯೊ ಕೇಳುವ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ). ಅದೇ ವೆಬ್‌ಲಿಂಕ್‌ನಲ್ಲಿರುವ ವಾಟ್ಸ್‌ ಆ್ಯಪ್‌ – ಮೈಕ್ ಬಳಸಿ, ತಾವೂ ರೇಡಿಯೊ ಕೇಂದ್ರದೊಂದಿಗೆ ಮಾತಾಡುತ್ತಾರೆ. ಆ ಮಾಹಿತಿ ವೆಬ್‌ತಾಣದಲ್ಲಿ ಧ್ವನಿಮುದ್ರಿತವಾಗಿ, ಬೇರೆಯವರೂ ಕೇಳಬಹುದು. 

ತುರುವೇಕೆರೆ ತಾಲ್ಲೂಕಿನಾದ್ಯಂತ, ಇದೇ ರೀತಿ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಒಂದು ತಿಂಗಳ ಕಾಲ ‘ಕೊರೊನಾ ಜಾಗೃತಿ’ ಮೂಡಿಸಿತು ಈ ಸಂಚಾರಿ ರೇಡಿಯೊ. ಕೊರೊನಾ ಕುರಿತ ಸಂದೇಶಗಳು, ಲಾವಣಿಗಳನ್ನು ಬಿತ್ತರಿಸಿತು. ಶುಚಿತ್ವ ಕಾಪಾಡುವುದು, ಆರೋಗ್ಯ ಜಾಗೃತಿಯಂತಹ ಪ್ರಕಟಣೆಗಳನ್ನೂ ಪ್ರಸಾರ ಮಾಡಿತು. ರೆಡ್‍ಕ್ರಾಸ್ ಸಂಘಟನೆಯ ಮುಖ್ಯಸ್ಥ ಡಾ. ಅಚ್ಯುತರಾವ್ ನೇತೃತ್ವದಲ್ಲಿ ಸಂಚಾರಿ ರೇಡಿಯೊ ಜಾಗೃತಿ ತಾಲ್ಲೂಕಿನ ಗಡಿಭಾಗದ ಹಳ್ಳಿಗಳವರೆಗೂ ತಲುಪಿತು.

ಹಳ್ಳಿ ಹಳ್ಳಿಯಲ್ಲೂ ಸಂಚರಿಸಿದ ಈ ರೇಡಿಯೊದೊಂದಿಗೆ ಊರಿನ ಮುಖಂಡರು, ಯುವಕರು, ಗೃಹಿಣಿಯರು, ಆಟೊ ಚಾಲಕರು, ಕೂಲಿ ಕಾರ್ಮಿಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಅಭಿಪ್ರಾಯ, ಕಷ್ಟಗಳನ್ನು ಹಂಚಿಕೊಂಡರು. ‘ಆ ಎಲ್ಲ ಮಾಹಿತಿಯೂ ಜಾಲತಾಣದಲ್ಲಿ ದಾಖಲಾಗಿದ್ದು, ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ‘ನಮ್ ಹಳ್ಳಿ ರೇಡಿಯೊ’ ಕೇಂದ್ರದ ಮುಖ್ಯಸ್ಥ ಎಂ.ಪಿ.ಗಿರೀಶ್. ಹೀಗೆ ಬೆಳಿಗ್ಗೆಯಿಂದ ಸಂಜೆವರೆಗೂ ಜಾಗೃತಿ ಕಾರ್ಯಕ್ರಮದ ನಂತರ, ವಿವಿಧ ಸಂಘಟನೆಗಳ ಜತೆ ಸೇರಿ ಸಂಜೆ ವೇಳೆಗೆ ಒಂದು ಹಳ್ಳಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡೇ ‘ಅರಳಿಕಟ್ಟೆ’ ಮಾದರಿಯಲ್ಲಿ ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕ ಸಂವಾದ ನಡೆಸಿದರು.

ಈಗಲೂ ‘ನಮ್‌ ಹಳ್ಳಿ ರೇಡಿಯೊ’ ತುರುವೇಕರೆ ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳಲ್ಲಿ ಕೊರೊನಾ ಜಾಗೃತಿ ಅಭಿಯಾನವನ್ನು ಮುಂದುವರಿಸಿದೆ.  (ಸಂಚಾರಿ ರೇಡಿಯೊ ನಡೆಸಿದ ಜಾಗೃತಿ ಕಾರ್ಯಕ್ರಮಗಳನ್ನು ಕೇಳಲು ‘ನಮ್ ಹಳ್ಳಿ ರೇಡಿಯೊ’ ಲಿಂಕ್:  http://www.namdu1radio.com ಕ್ಲಿಕ್ ಮಾಡಿ).

ಜಾಗೃತಿ ಜತೆಯಲ್ಲಿ ವೈದ್ಯಕೀಯ ನೆರವು

ಜಾಗೃತಿ ಅಭಿಯಾನದ ಸಮಯದಲ್ಲಿ ಸಂಚಾರಿ ರೇಡಿಯೊ ಮಾಹಿತಿ ವಿನಿಮಯದ ಜತೆಗೆ, ಡಾ.ಶರತ್ ಮತ್ತು ತಂಡ ಕೊರೊನಾ ಅಲ್ಲದೇ, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಔಷಧ ನೀಡಿದರು.

ಎಚ್.ಆರ್.ರಾಮೇಗೌಡ ಹಾಗೂ ಸ್ನೇಹಿತರು ತುರುವೇಕೆರೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು, ಅಲೆಮಾರಿ ತಂಡಗಳು, ಕೂಲಿಕಾರ್ಮಿಕರು ಇತರೆ ನೂರಾರು ಅಸಹಾಯಕ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಿದರು. ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಮಂಜುಳಾದೇವಿ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಪ್ರಜ್ವಲ್ ಮತ್ತಿತರರು ಕೊಳೆಗೇರಿ/ ಹಿಂದುಳಿದ ಬಡಾವಣೆಗಳಲ್ಲಿರುವ 1200 ಜನಕ್ಕೆ ಪ್ರತಿದಿನ ಮನೆ ಮನೆಗೆ ಹಾಲು ತಲುಪಿಸಿದರು.

ಡಾ. ರಂಗನಾಥ್, ಕರ್ತವ್ಯ ನಿರತ ಪೌರಕಾರ್ಮಿಕರು ಹಾಗೂ ಪೊಲೀಸ್‌ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಿದರು. ಇದಕ್ಕಾಗಿ ತುರುವೇಕರೆ ತಾಲ್ಲೂಕಿನ ಚಿಮ್ಮನಹಳ್ಳಿಯ ಮುನೀಶ್ವರ ಶಿಕ್ಷಣ ಸಂಸ್ಥೆಯ ಮಹಾಪೋಷಕ ಸಿ.ಎನ್. ಶಿವಪ್ಪ ವಾಹನದ ನೆರವು ಹಾಗೂ ಉಷ್ಣಮಾಪಕ ಯಂತ್ರದ(ಸ್ಕ್ರೀನಿಂಗ್) ವ್ಯವಸ್ಥೆ ಮಾಡಿದರು. ಈ ಅಭಿಯಾನಕ್ಕೆ ತಹಸೀಲ್ದಾರ್ ನಯೀಮ್ ಉನ್ನೀಸಾ, ಪೊಲೀಸ್ ಅಧಿಕಾರಿಗಳಾದ ಲೋಕೇಶ್, ಪ್ರೀತಮ್ ಬೆನ್ನುಲುಬಾಗಿ ನಿಂತಿದ್ದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು