ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಅತಂತ್ರ ಸ್ಥಿತಿಯಲ್ಲಿ ಕಾಫಿನಾಡಿಗೆ ಬಂದ ನೆರೆ ಜಿಲ್ಲೆಗಳ ಕಾರ್ಮಿಕರು

Last Updated 29 ಮಾರ್ಚ್ 2020, 3:33 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದ, ಜಿಲ್ಲೆಗೆ ಹೊರ ಜಲ್ಲೆಯಿಂದ ಆಗಮಿಸಿದ್ದ ಅಲೆಮಾರಿ ಕೂಲಿ ಕಾರ್ಮಿಕ ವರ್ಗ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.ಇತ್ತ ಇರಲು ಆಗದೆ, ಹಿಂದಿರುಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿಯೇ ನೂರಾರು ಸಂಖ್ಯೆಯಲ್ಲಿ ಅಲೆಮಾರಿ ಕಾರ್ಮಿಕರಿದ್ದು, ತಮ್ಮ ಮನೆಗಳಿಗೆ ಹಿಂದಿರುಗಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ರಸ್ತೆ, ಚರಂಡಿ, ಕೆರೆ ಸೇರಿದಂತೆ ಇನ್ನಿತರ ಮಣ್ಣು ಕೆಲಸ ನಿರ್ವಹಿಸುವ ಕಾರ್ಮಿಕರು, ರಸ್ತೆ ಕೆಲಸ ಮಾಡುವ ಕಾರ್ಮಿಕರು ಹೊರ ಜಿಲ್ಲೆ, ಹೊರ ರಾಜ್ಯದಿಂದ ಇಲ್ಲಿಗೆ ತಿಂಗಳುಗಳ ಹಿಂದೆಯೇ ಆಗಮಿಸಿದ್ದಾರೆ. ಅಲ್ಲಲ್ಲಿ ಡೇರೆಗಳನ್ನು ನಿರ್ಮಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದ ಇಂತಹ ಕುಟುಂಬಗಳು ಇದೀಗ ಅಕ್ಷರಶಃ ಬೀದಿಗೆ ಬಿದ್ದಿವೆ.

ವಾರ್ಷಿಕ ಮಳೆಗಾಲ ಮುಗಿದ ನಂತರ ತಮ್ಮ ಕೃಷಿ ಜಮೀನಿನಲ್ಲ. ಕೃಷಿ ಚಟುವಟಿಕೆ ಮುಗಿಸಿ ಜನವರಿ ಫೆಬ್ರವರಿಯಲ್ಲಿ ಕೊಡಗಿಗೆ ಕೂಲಿಗಾಗಿ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಈ ವರ್ಷ ಕೊರೊನಾ ವೈರಸ್ ನಿಂದಾಗಿ ದೇಶದಲ್ಲಿ ಲಾಕ್ ಡೌನ್ ಹೇರಿದ್ದರಿಂದ, ಈ ಆದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಇಂತಹ ಕೂಲಿ ಕಾರ್ಮಿಕರನ್ನು ಇದೀಗ ಮಾಲೀಕರುಗಳು ತಮ್ಮ ಊರಿಗೆ ಹೋಗುವಂತೆ ಸೂಚನೆ ನೀಡಿದ್ದು, ಇದರಿಂದಾಗಿ ಇಂತಹ ಮಂದಿ ದಿಕ್ಕುತೋಚದೇ ಇಲ್ಲಿನ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ತಮ್ಮ ಊರಿಗೆ ತೆರಳಲು ಅನುವು ಮಾಡಿಕೊಡಬೇಕೆಂದು ಕೈಮುಗಿಯುತ್ತಿದ್ದಾರೆ.

ಆಂದ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲ್ಲೂಕಿನ ಮೂರು ಕುಟುಂಬಗಳು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಂದಳ್ಳಿ ಸುತ್ತಮುತ್ತ ಕೆರೆ, ರಸ್ತೆ ಚರಂಡಿ ಸೇರಿದಂತೆ ಮಣ್ಣು ಕೆಲಸದಲ್ಲಿ ತೊಡಗಿಕೊಂಡಿದ್ದು, ಇದೀಗ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸವೂ ಇಲ್ಲದೇ, ಇರಲು ಜೋಪಡಿಯೂ ಇಲ್ಲದೆ ಅತಂತ್ರರಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕುಂದಳ್ಳಿಯಿಂದ 14 ಕಿ.ಮೀ. ದೂರವಿರುವ ಸೋಮವಾರಪೇಟೆಗೆ ಕಾಲ್ನಡಿಗೆಯಲ್ಲಿ ಬಂದ 8 ಮಂದಿಯ ತಂಡ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕಣ್ಣೀರಿಡುತ್ತಾ ಊರಿನ ದಾರಿ ತೋರಿಸಿ ಎಂದು ಮನವಿ ಮಾಡುತ್ತಿತ್ತು.

ಇದನ್ನು ಗಮಿಸಿದ ಪ.ಪಂ. ಸದಸ್ಯ ಬಿ.ಆರ್. ಮಹೇಶ್ ಅವರು, ನಿರ್ಗತಿಕರಿಗೆ ಬಾಳೆಹಣ್ಣು, ಬಿಸ್ಕೆಟ್, ಬ್ರೆಡ್ ನೀಡಿ, ಊರಿಗೆ ಕಳುಹಿಸುವ ವ್ಯವಸ್ಥೆಗಾಗಿ ತಹಶೀಲ್ದಾರ್, ಠಾಣಾಧಿಕಾರಿ, ಜಿಲ್ಲಾ ಪೊಲೀಸರು, ಡಿವೈಎಸ್ ಪಿ ಕಚೇರಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಇವರಿಗೆ ಸದ್ಯಕ್ಕೆ ತಾಲ್ಲೂಕು ಆಡಳಿತದಿಂದ ಒಂದಿಷ್ಟು ಪಡಿತರದ ವ್ಯವಸ್ಥೆ ಮಾಡಿಕೊಟ್ಟು ವಾಹನದ ಮೂಲಕ ಕುಂದಳ್ಳಿಗೆ ಕಳುಹಿಸಲಾಯಿತು.

ತಂಡದಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ 8 ವರ್ಷದ ಬಾಲಕ, 10 ವರ್ಷದ ಬಾಲಕಿಯನ್ನು ಒಳಗೊಂಡ ಈ ತಂಡ ಸ್ವ ಗ್ರಾಮ ತಲುಪಲು ಸಾಧ್ಯವಾಗದೇ ಹಿಂದಿರುಗಿತು. ತಹಶೀಲ್ದಾರ್ ಕಚೇರಿ ಎದುರು ಕಣ್ಣೀರಿಟ್ಟರೂ ಸಹ ಸರ್ಕಾರದ ಆದೇಶದಿಂದಾಗಿ ಇವರುಗಳನ್ನು ವಾಪಸ್ ಊರಿಗೆ ಕಳುಹಿಸಲು ಅಸಾಧ್ಯವಾಯಿತು.

ಕೊಡಗಿನಿಂದ ಕಳುಹಿಸಿದರೂ ಇತರ ಜಿಲ್ಲೆಗಳ ಗಡಿಗಳಲ್ಲಿ ಅಡ್ಡಗಟ್ಟುತ್ತಾರೆ. ಕೆಲ ದಿನಗಳ ಕಾಲ ತಾವಿದ್ದ ಸ್ಥಳದಲ್ಲಿಯೇ ಇದ್ದು, ಪರಿಸ್ಥಿತಿ ತಿಳಿಯಾದ ನಂತರ ಊರಿಗೆ ಹಿಂದಿರುಗಿ ಎಂದು ಅಧಿಕಾರಿಗಳು ಸಲಹೆ ನೀಡಿದರು.

ಇಂತಹ ನೂರಾರು ಮಂದಿ ಸೋಮವಾರಪೇಟೆಯಾದ್ಯಂತ ಬೀಡುಬಿಟ್ಟಿದ್ದು, ವಾಪಸ್ ಊರಿಗೆ ಹೋಗಲಾಗದೇ, ಇಲ್ಲೂ ಕೆಲಸ ಮಾಡಲಾಗದೇ ಅತಂತ್ರರಾಗಿರುವುದನ್ನು ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT