ಬುಧವಾರ, ಜುಲೈ 15, 2020
22 °C

ಕೊರೊನಾ ಸೋಂಕು | ರಾಜ್ಯದಲ್ಲಿ ಮೃತರ ಸಂಖ್ಯೆ 61ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿನಿಂದ ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿರುವುದು ಭಾನುವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಕಲಬುರ್ಗಿ ಹಾಗೂ ಉಡುಪಿಯಲ್ಲಿ ತಲಾ 39 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 239 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್ ಪೀಡಿತರ ಸಂಖ್ಯೆ 5,452ಕ್ಕೆ ತಲುಪಿದೆ. 48 ಗಂಟೆಗಳಲ್ಲಿ 617 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 183 ಮಂದಿ ಅನ್ಯರಾಜ್ಯಗಳಿಂದ ಬಂದವರಾಗಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ 2,991 ಮಂದಿ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. 

ಕಲಬುರ್ಗಿ 39, ಯಾದಗಿರಿ 39, ಬೆಳಗಾವಿ 38, ಬೆಂಗಳೂರು 17, ದಕ್ಷಿಣ ಕನ್ನಡ 17, ದಾವಣಗೆರೆ 17, ಶಿವಮೊಗ್ಗ 12, ವಿಜಯಪುರ 9, ಬೀದರ್ 7, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 5, ಹಾಸನ 5, ಧಾರವಾಡ 3, ಗದಗ 2, ಉತ್ತರ ಕನ್ನಡ 2 ಹಾಗೂ ಮಂಡ್ಯ, ರಾಯಚೂರಿನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಮಂಡ್ಯದಲ್ಲಿ 42 ಸೇರಿದಂತೆ 143 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಬೆಂಗಳೂರಿನ 61 ವರ್ಷದ ಮೃತ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮೇ 29 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.6ರಂದು ಅವರು ನಿಧನರಾಗಿದ್ದಾರೆ. ಅದೇ ರೀತಿ, 57 ವರ್ಷದ ಪುರುಷ ಕೂಡ ಮಧುಮೇಹ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಜೂ.3ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.7ರಂದು ಮೃತಪಟ್ಟಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 15ಕ್ಕೆ ತಲುಪಿದೆ. 

ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಶುಶ್ರೂಷಕರು, ಆರೋಗ್ಯ ಇಲಾಖೆಯ ಇಬ್ಬರು ಗ್ರೂಪ್ ‘ಡಿ’ ನೌಕರರು ಸೋಂಕಿತರಾಗಿದ್ದಾರೆ. ಕಲಬುರ್ಗಿಯಲ್ಲಿ ವರದಿಯಾದ ಪ್ರಕರಣಗಳಲ್ಲಿ ಇಬ್ಬರು ಸೌದಿ ಅರೇಬಿಯಾದಿಂದ ಬಂದವರಾಗಿದ್ದಾರೆ. 36 ಮಂದಿ ಮಹಾರಾಷ್ಟ್ರದ ಪ್ರಯಾಣ ಇತಿಹಾಸ ಹೊಂದಿದ್ದಾರೆ. ಒಬ್ಬ ವ್ಯಕ್ತಿಯ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಯಾದಗಿರಿಯಲ್ಲಿ ಸೋಂಕಿತರಾದ ಎಲ್ಲರೂ ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಬೆಳಗಾವಿಯಲ್ಲಿ ಸೋಂಕಿತರಾದವರೂ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು