ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಾಗ ಚಲನೆಗೆ ಸಾಫ್ಟ್‌ವೇರ್‌ ಅಡ್ಡಿ

ಎನ್‌ಎಚ್‌ಎಐ ಆದೇಶವೇ ಅವೈಜ್ಞಾನಿಕ ? l ಫಾಸ್ಟ್ಯಾಗ್‌ ಕಡ್ಡಾಯ ಪಾಲನೆ ಕಷ್ಟವೋ ಕಷ್ಟ
Last Updated 17 ಜನವರಿ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಟೋಲ್‌ಗೇಟ್‌ಗಳಲ್ಲಿ ಜ. 15ರಿಂದಲೇ ಫಾಸ್ಟ್ಯಾಗ್ ಕಡ್ಡಾಯವೆಂದು ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆದೇಶ ಹೊರಡಿಸಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ರಾಜ್ಯದ ಹಲವು ಟೋಲ್‌ಗಳಲ್ಲಿ ಅಳವಡಿಸಿರುವ ಸ್ಕ್ಯಾನರ್‌ಗಳು ಫಾಸ್ಟ್ಯಾಗ್ ಸ್ಟಿಕರ್‌ಗಳಿಂದ ದತ್ತಾಂಶವನ್ನು ತಕ್ಷಣಕ್ಕೆ ಗ್ರಹಿಸುವಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಟೋಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ.

ಶೇ 55–60ರಷ್ಟು ವಾಹನ ಮಾಲೀಕರು ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ. ಇಂತಹ ವಾಹನಗಳು
ನಗದು ಪಾವತಿಸುವ ಲೇನ್‌ನಲ್ಲಿ ಹೋಗುವಾಗ ಸಹಜವಾಗಿ ವಿಳಂಬವಾಗುತ್ತಿದೆ.

ಫಾಸ್ಟ್ಯಾಗ್ ಇದ್ದರೂ ಸ್ಕ್ಯಾನರ್‌ಗಳು ಗ್ರಹಿಸದೇ ಇರುವುದರಿಂದ ಟೋಲ್‌ ಸಿಬ್ಬಂದಿ ಜತೆ ವಾಹನ ಚಾಲಕರು ಜಟಾಪಟಿಗೆ ಇಳಿಯುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಜ್ಜಾಗುವ ಮುನ್ನವೇ ಫಾಸ್ಟ್ಯಾಗ್ ಕಡ್ಡಾಯ ಮಾಡಿರುವ ಎನ್‌ಎಚ್ಎಐ ಕ್ರಮಕ್ಕೆ ಟೋಲ್‌ ಸಿಬ್ಬಂದಿ ಸಹ ಅಸಮಾಧಾನ ವ್ಯಕ್ತಪಡಿ
ಸುತ್ತಾರೆ. ಕೆಲವು ಟೋಲ್‌ಗಳಲ್ಲಿ ಕಡ್ಡಾಯದ ಆದೇಶವಿದ್ದರೂ ನಗದು ಪಾವತಿಸಿ ಹೋಗಬಹುದಾದ ಗೇಟ್‌
ಗಳನ್ನು ತೆರೆದು ಅವಕಾಶ ಮಾಡಿಕೊಟ್ಟಿದ್ದಾರೆ.

ಫಾಸ್ಟ್ಯಾಗ್ ಅಳವಡಿಸಿಕೊಳ್ಳದವರು ಈ ಲೇನ್‌ಗಳಲ್ಲಿ ಹೋದರೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ಅಂತಹವರು ಕಡ್ಡಾಯವಾಗಿ ನಗದು ಲೇನ್‌ನಲ್ಲಿಯೇ ಚಲಿಸಿದರೆ ಮಾಮೂಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ.

‘ಬೆಂಗಳೂರಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯ ಟೋಲ್‌ಗೇಟ್‌ನಲ್ಲಿ 19 ಸಾಲುಗಳಿವೆ. ಎಲ್ಲೆಡೆಯೂ ಫಾಸ್ಟ್ಯಾಗ್ ಸೌಲಭ್ಯವಿದೆ. ಬೆಂಗಳೂರಿನಿಂದ ನಿಲ್ದಾಣ ಕಡೆಯ 10 ಸಾಲು ಹಾಗೂ ನಿಲ್ದಾಣದಿಂದ ನಗರ ಪ್ರವೇಶಿಸುವ 9 ಸಾಲುಗಳ ಪೈಕಿ ತಲಾ ಎರಡರಲ್ಲಿನಗದು ಸ್ವೀಕಾರಕ್ಕೆ ಅವಕಾಶವಿದೆ. ರಾತ್ರಿ ವೇಳೆ ದಟ್ಟಣೆ ಹೆಚ್ಚಾದರೆ ಮತ್ತಷ್ಟು ಸಾಲಿನಲ್ಲಿ ನಗದು ಸ್ವೀಕರಿಸಲಾಗುವುದು’ ಎಂದು ದೇವನಹಳ್ಳಿ ಟೋಲ್‌ಗೇಟ್‌ ಸಿಬ್ಬಂದಿ ಹೇಳಿದರು.

‘ನಗದು ಕೌಂಟರ್‌ನಲ್ಲಿ ಚಾಲ್ತಿಯಲ್ಲಿರುವ ಶುಲ್ಕ ಪಡೆಯುತ್ತೇವೆ. ಫಾಸ್ಟ್ಯಾಗ್‌ಗೆ ಮೀಸಲಿಟ್ಟ ಸಾಲಿನಲ್ಲಿ ಫಾಸ್ಟ್ಯಾಗ್‌ ಇಲ್ಲದೇ ಬಂದರೆ ದುಪ್ಪಟ್ಟು ಶುಲ್ಕ ಸಂಗ್ರಹಿಸುತ್ತಿದ್ದೇವೆ. ಕೆಲವರು ಫಾಸ್ಟ್ಯಾಗ್‌ ಸಾಲಿನಲ್ಲಿ ಬಂದು ಜಗಳ ಮಾಡುತ್ತಿದ್ದಾರೆ. ನಿತ್ಯವೂ ಜಟಾಪಟಿ ನಡೆಯುತ್ತಿದೆ’ ಎಂದು ಸಿಬ್ಬಂದಿ ತಿಳಿಸಿದರು.

ಸಾಫ್ಟ್‌ವೇರ್‌ ಸಮಸ್ಯೆ: ಫಾಸ್ಟ್ಯಾಗ್‌ನಲ್ಲಿರುವ ರೇಡಿಯೊ ತರಂಗಾಂತರ ಗ್ರಹಿಸಲು ಟೋಲ್‌ಗೇಟ್‌ಗಳಲ್ಲಿ ಪ್ರತ್ಯೇಕ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಇದರ ಕಾರ್ಯಾಚರಣೆ ಮೇಲಿಂದ ಮೇಲೆ ಸ್ಥಗಿತಗೊಳ್ಳುತ್ತಿದ್ದು, ಸಿಬ್ಬಂದಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದು ಜಟಾಪಟಿಗೂ ಕಾರಣವಾಗುತ್ತಿದೆ.

‘ಸಾಫ್ಟ್‌ವೇರ್‌ ಸಮಸ್ಯೆ ಇರುವುದರಿಂದ ಗೇಟ್‌ ಬೇಗನೇ ಮುಚ್ಚುವುದಿಲ್ಲ. ಇದೇ ಗೇಟ್‌ನಲ್ಲೇ ಒಂದರ ಹಿಂದೊಂದು ವಾಹನಗಳು ಎಸ್ಕೇಪ್ ಆಗುತ್ತಿವೆ. ಅವುಗಳನ್ನು ಹಿಡಿಯಲೂ ಆಗುತ್ತಿಲ್ಲ’ ಎಂದು ಟೋಲ್‌ಗೇಟ್‌ ಸಿಬ್ಬಂದಿ ಹೇಳುತ್ತಾರೆ. ಇದು ರಾಜ್ಯದ ಬಹುತೇಕ ಟೋಲ್‌ಗಲ್ಲಿರುವ ಸಮಸ್ಯೆಯಾಗಿದೆ.

‘ಎನ್‌ಎಚ್‌ಎಐ ಆದೇಶವೇ ಅವೈಜ್ಞಾನಿಕವಾದದ್ದು. ಇದನ್ನು ನಾವೆಲ್ಲವೂ ಪ್ರಶ್ನಿಸುತ್ತಿದ್ದೇವೆ. ಕಡ್ಡಾಯವಿದ್ದರೂ ನಗದು ಪಡೆಯುತ್ತಿದ್ದೇವೆ. ಆ ರೀತಿ ಮಾಡದಿದ್ದರೆ ಜನ ನಮ್ಮ ಮೇಲೆಯೇ ಹರಿಹಾಯುತ್ತಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಫಾಸ್ಟ್ಯಾಗ್‌’ ಖಾತೆಗೆ ನಗದು ರೂಪದಲ್ಲಿ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ನೆಟ್‌, ಮೊಬೈಲ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌, ಗೂಗಲ್‌ ಪೇ ಮೂಲಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಬೇಕು. ಸರಕು ಸಾಗಣೆ ವಾಹನಗಳ ಬಹುತೇಕ ಚಾಲಕರು ಡಿಜಿಟಲ್‌ ಸ್ವರೂಪದ ಹಣ ಪಾವತಿ ಜ್ಞಾನ ಹೊಂದಿಲ್ಲ. ‘ಫಾಸ್ಟ್ಯಾಗ್‌’ ಅಳವಡಿಸಿಕೊಂಡರೂ ಖಾತೆಯಲ್ಲಿ ಹಣವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಿರಿಯೂರು, ಕೊಪ್ಪಳ, ಕಲ್ಬುರ್ಗಿ, ಹಾಸನ, ಉಡುಪಿ, ಬೆಳಗಾವಿ, ಹುಬ್ಬಳ್ಳಿ ಮತ್ತು ಮೈಸೂರು ಟೋಲ್‌ಗಳಲ್ಲಿನ ಈ ಸಮಸ್ಯೆ ಕಂಡು ಬರುತ್ತಿದೆ. ‘ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿ ಎಂದು ಚಾಲಕರನ್ನು ಸಾಗ ಹಾಕುತ್ತಿದ್ದೇವೆ’ ಎಂದು ಟೋಲ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಹೇಳುತ್ತಾರೆ.

ಪ್ರಯಾಣಿಕರ ಪರದಾಟ: ವಾಹನಗಳ ದಟ್ಟಣೆ ಹೆಚ್ಚಾದಾಗ ಕೆಲವು ಬಸ್‌ಗಳು ಟೋಲ್‌ಗೇಟ್ ಬಳಿಯೇ ಸಂಚಾರ ಮೊಟಕುಗೊಳಿಸುತ್ತಿದ್ದು, ಇದದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ವಾಹನಗಳ ಸರಾಗ ಸಂಚಾರಕ್ಕೆ ಜಾರಿಗೆ ತಂದಿರುವ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಕಲಬುರ್ಗಿ ಜಿಲ್ಲೆಯಲ್ಲಿ ವಾಹನ ಸವಾರರ ನೆಮ್ಮದಿ ಕೆಡಿಸಿದ್ದು, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ.

ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲ್ಲೂಕು ಮಂಗಲಗಿ ಗ್ರಾಮದ ಬಳಿ ಹೈದರಾಬಾದ್–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರಲ್ಲಿ ಎಲ್‌ ಅಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾದಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಶುಲ್ಕ ವಸೂಲಿ ತೀರ ನೀರಸವಾಗಿದೆ.

ಫಾಸ್ಟ್ಯಾಗ್ ಸ್ಟಿಕ್ಕರ್‌ನಲ್ಲಿನ ಬಾರ್ ಕೋಡ್ ಸ್ಕ್ಯಾನ್ ಮಾಡುವಲ್ಲಿ ಸಮಸ್ಯೆ ಇದ್ದರೆ, ವಾಹನ ಮಾಲೀಕರು ಟೋಲ್ ಶುಲ್ಕ ಪಾವತಿಸದೆ ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT