ಕ್ರೇನ್‌ಗೆ ಗುದ್ದಿದ ಮಾರುತಿ ವ್ಯಾನ್: 4 ಮಂದಿ ಸಾವು

7

ಕ್ರೇನ್‌ಗೆ ಗುದ್ದಿದ ಮಾರುತಿ ವ್ಯಾನ್: 4 ಮಂದಿ ಸಾವು

Published:
Updated:

ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಕಟಾವೀರನಹಳ್ಳಿ ಗೇಟ್ ಬಳಿ ಬುಧವಾರ ಮುಂಜಾನೆ ಕೆಟ್ಟು ನಿಂತಿದ್ದ ಲಾರಿಯನ್ನು ತೆರವು ಮಾಡುತ್ತಿದ್ದ ಕ್ರೇನ್‌ಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಕಾರಣ 4 ಮಂದಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಒಮಿನಿ ವ್ಯಾನ್ ಚಾಲಕ ಬೆಂಗಳೂರಿನ ಗಿಡದಪಾಳ್ಯದ ವೆಂಕಟೇಶ್ (35), ಬೆಂಗಳೂರು ಕಿತ್ತನಹಳ್ಳಿಯ ಶಶಿಕುಮಾರ್ (28), ಹೇಮಂತ್ ಕುಮಾರ್ (26) ಹಾಗೂ ಕಿರಣ್ (25) ಮೃತರು.

ತೀವ್ರವಾಗಿ ಗಾಯಗೊಂಡಿದ್ದ ಬೆಂಗಳೂರು ಕಿತ್ತನಹಳ್ಳಿಯ ಪ್ರಜ್ವಲ್ (22), ಅನಿಲ್ ಕುಮಾರ್ (20) ಹಾಗೂ ಮಲ್ಲಸಂದ್ರದ ಅಶೋಕ (25) ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

***
ನೆದರ್ಲೆಂಡ್ ನಲ್ಲಿ ಕನಕಪುರ ಟೆಕಿ ಆತ್ಮಹತ್ಯೆ
ಚನ್ನಪಟ್ಟಣ: ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಟೆಕಿಯೊಬ್ಬರು ನೆದರ್ಲೆಂಡ್ ದೇಶದಲ್ಲಿ ಮಂಗಳವಾರ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ನೀಲಕಂಠಯ್ಯ ಎಂಬುವರ ಮಗ ಶಿವಪ್ರಸಾದ್ (40) ಮೃತಪಟ್ಟವರು. ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಕೆಲಸದ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿತ್ತು. ಇದರಿಂದ ಖಿನ್ನರಾದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

***
ಮಗಳನ್ನು ಥಳಿಸಿದ ತಾಯಿಯ ಬಂಧನ
ಕಾರವಾರ: ಮಗಳನ್ನು ಅಮಾನುಷವಾಗಿ ಥಳಿಸಿ ಗಾಯಗೊಳಿಸಿದ ಆರೋಪದ ಮೇರೆಗೆ, ಪಿಂಗೆ ರಸ್ತೆಯ ನಿವಾಸಿ ರೇಣುಕಾ ಗೋಕರ್ಣ ಎಂಬುವವರನ್ನು ಬುಧವಾರ ಬಂಧಿಸಲಾಗಿದೆ.

12 ವರ್ಷದ ಮಗಳ ಮೇಲೆ ಅವರು ಭಾನುವಾರ ಬಡಿಗೆಯಿಂದ ಹಲ್ಲೆ ಮಾಡಿದ್ದರು. ಇದರಿಂದಾಗಿ ಬಾಲಕಿಯ ತಲೆಯ ಮೇಲೆ ಗಾಯಗಳಾಗಿದ್ದವು. ಕೈಯ ಮೇಲೆ ಸುಟ್ಟ ಗಾಯ ಇತ್ತು. ಅವರ ಇನ್ನೊಬ್ಬ ಮಗನ ಕಾಲಿನ ಮೇಲೆಯೂ ಸುಟ್ಟ ಗಾಯಗಳು ಇದ್ದವು. ರೇಣುಕಾ, ಪಾತ್ರೆ ಮಾರಾಟದ ಕೆಲಸ ಮಾಡುತ್ತಿದ್ದರು.

ಸುಳಿವು ನೀಡಿದ ವಿಡಿಯೊ: ಬಾಲಕಿಯ ಮೇಲೆ ತಾಯಿ ಹಲ್ಲೆ ನಡೆಸುತ್ತಿದ್ದುದನ್ನು ಪಕ್ಕದ ಮನೆಯ ಬಾಲಕಿಯೊಬ್ಬಳು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು. ಬಾಲಕಿ ಮೇಲೆ ಗಂಭೀರ ಹಲ್ಲೆ ನಡೆಸುತ್ತಿರುವ ಹಾಗೂ ತಡೆಯಲು ಬಂದವರ ಕೆಲವರ ಮೇಲೆ ರೇಗಾಡುತ್ತಿದ್ದ ದೃಶ್ಯಗಳು ಅದರಲ್ಲಿ ಸೆರೆಯಾಗಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !