ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಜಲಮೂಲ ಸಂರಕ್ಷಣೆಗೆ ಕೋಟಿ ಕೋಟಿ ವ್ಯಯ

Last Updated 25 ಜನವರಿ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು:ಅಂತರ್ಜಲ ಸಂರಕ್ಷಣೆ, ಜಲ ಮೂಲ ಕಾಪಿಟ್ಟುಕೊಳ್ಳಲು ರಾಜ್ಯ ಸರ್ಕಾರ ಹತ್ತಾರು ಯೋಜನೆ ರೂಪಿಸಿ, ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೂ ರಾಜ್ಯದ ಎಂಟು ದಿಕ್ಕುಗಳ ಸುತ್ತಗಲಕ್ಕೆ ನೀರಿಗಾಗಿ ಹಾಹಾಕಾರ ಮಾತ್ರ ನಿಂತಿಲ್ಲ. ಅಂತರ್ಜಲ ಹೆಚ್ಚಿಸುವ ಸಲುವಾಗಿ ವಿವಿಧ ಯೋಜನೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ₹6 ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯಮಾಡಲಾಗಿದೆ ಎಂಬುದು ಸರ್ಕಾರ ನೀಡುವ ಅಂಕಿ ಅಂಶ. ಆದರೆ, ಜಲಸಂರಕ್ಷಣೆಯಲ್ಲಿ ಎಷ್ಟು ದೂರ ಕ್ರಮಿಸಲಾಗಿದೆ, ನೀರಿನ ದಾಹ ತಣಿಸುವಲ್ಲಿ ಯಶಸ್ವಿಯಾದ ಮಾದರಿ ಯೋಜನೆಗಳು ಯಾವುವು ಎಂಬ ಮಾಹಿತಿಯೇ ಸರ್ಕಾರದ ಬಳಿ ಇಲ್ಲ. ಮೇಲಿಂದ ಮೇಲೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆಯೇ ವಿನಃ ಜಲಸುಸ್ಥಿರತೆಯತ್ತ ಸರ್ಕಾರ ಗಮನ ಕೇಂದ್ರೀಕರಿಸದೇ ಇರುವುದು ಗೋಚರವಾಗುತ್ತದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯು ಪ್ರಮುಖವಾಗಿ ಎಂ ನರೇಗಾ ಯೋಜನೆಯನ್ನು ಬಳಸಿಕೊಂಡು ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪ್ರಮುಖವಾಗಿ ಬಹುಕಮಾನಿನ ಚೆಕ್‌ ಡ್ಯಾಮ್‌ಗಳ ನಿರ್ಮಾಣಕ್ಕೆ ಒತ್ತುನೀಡಿದ್ದು, ಐದು ವರ್ಷಗಳಲ್ಲಿ ಸುಮಾರು 8 ಸಾವಿರ ಚೆಕ್ ಡ್ಯಾಮ್‌ಗಳು ನಿರ್ಮಾಣ ಕಂಡಿವೆ. ಆರಂಭದಲ್ಲಿ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ಈಗ ರಾಜ್ಯದೆಲ್ಲೆಡೆವಿಸ್ತರಿಸಲಾಗಿದೆ. ಮೂರು ಕಮಾನುಗಳಿರುವ ಇರುವ ಒಂದು ಚೆಕ್ ಡ್ಯಾಮ್ ನಿರ್ಮಾಣಕ್ಕೆ ₹4 ಲಕ್ಷದಿಂದ ₹5 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ಮಾಡುವ ಕಾರ್ಯ ಚುರುಕುಗೊಂಡಿದೆ. ನೀರಿಲ್ಲದೆ ಬರಿದಾದ ಬೋರ್‌ವೆಲ್‌ಗಳ ಬಳಿ ಗುಂಡಿಗಳನ್ನು ಅಳವಡಿಸಿ ಮಳೆ ನೀರು ಇಂಗಿಸುವ ಕೆಲಸ ನಡೆದಿದೆ. ಪ್ರತಿ ಘಟಕಕ್ಕೆ ₹60 ಸಾವಿರದಿಂದ ₹1 ಲಕ್ಷದವರೆಗೂ ಹಣ ನೀಡಲಾಗುತ್ತಿದ್ದು, ಐದು ವರ್ಷಗಳಲ್ಲಿ ಇಂತಹ 10 ಸಾವಿರ ಘಟಕಗಳನ್ನು ನಿರ್ಮಿಸಲಾಗಿದೆಎಂದು ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ಸಾಂಪ್ರದಾಯಿಕ ನೀರಿನ ಮೂಲಗಳಾದ ಕೆರೆ, ಕಟ್ಟೆ, ಗೋಕಟ್ಟೆ, ಕಲ್ಯಾಣಿಗಳನ್ನು ಸಂರಕ್ಷಿಸಿ ನೀರು ಸಂಗ್ರಹಕ್ಕೆ ಒತ್ತುನೀಡಲಾಗಿದೆ. ಅರಣ್ಯದ ಇಳಿಜಾರು ಪ್ರದೇಶಗಳಲ್ಲಿ ನೀರು ಇಂಗುವಂತೆ ಕಂದಕ ತೋಡಲಾಗುತ್ತಿದ್ದು, ಮಲೆನಾಡು ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಐದಾರು ವರ್ಷಗಳಲ್ಲಿ 10 ಸಾವಿರ ಕೆರೆಗಳ ಹೂಳು ತೆಗೆಯಲಾಗಿದ್ದು, 26 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.ನೀರಿಲ್ಲದೆ ಬರಿದಾದ ತೆರೆದ ಬಾವಿಗಳಿಗೆ ಮಳೆ ನೀರು ತುಂಬಿಸಲಾಗುತ್ತಿದೆ.

ನದಿ ಪುನಶ್ಚೇತನ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ವೇದಾವತಿ ನದಿ (ಚಿಕ್ಕಮಗಳೂರು– ಹಾಸನ– ಚಿತ್ರದುರ್ಗ ವ್ಯಾಪ್ತಿ), ಪಾಲಾರ್, ಉತ್ತರ ಪಿನಾಕಿನಿ (ಚಿಕ್ಕಬಳ್ಳಾಪುರ), ಕುಮುದ್ವತಿ (ರಾಮನಗರ– ಬೆಂಗಳೂರು ಗ್ರಾಮೀಣ) ನದಿ ಸಂರಕ್ಷಣೆ ಕಾರ್ಯ ಮುಂದುವರಿದಿದೆ.

ಜಲಾಮೃತ: ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿದ್ದ ‘ಜಲಾಮೃತ’ ಯೋಜನೆಯನ್ನು ಬೇರ್ಪಡಿಸಿ, ಅಂತರ್ಜಲ ಸಂರಕ್ಷಣೆಯ ಸಲುವಾಗಿ ಪ್ರತ್ಯೇಕ ಕಾರ್ಯನಿರ್ವಹಣೆಯ ಹೊಣೆ ನೀಡಲಾಗಿದ್ದು, ಉಸ್ತುವಾರಿಗೆ ಹಿರಿಯ ಅಧಿಕಾರಿಯನ್ನು ನೇಮಿಸಲಾಗಿದೆ. ಈ ಯೋಜನೆಯಲ್ಲಿ ಎರಡು ವರ್ಷಗಳಲ್ಲಿ 12 ಸಾವಿರ ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಕಲ್ಯಾಣಿಗಳು, ಗೋಕಟ್ಟೆಗಳು ಸೇರಿದಂತೆ ಸುಮಾರು 14 ಸಾವಿರ ಜಲಮೂಲಗಳ ಸಂರಕ್ಷಣೆಯ ಕೆಲಸ ಮುಂದುವರಿದಿದೆ.

ಸುಜಲ:ಜಲಾನಯನ ಅಭಿವೃದ್ಧಿ ಇಲಾಖೆಯು ವಿಶ್ವಬ್ಯಾಂಕ್ ನೆರವಿನೊಂದಿಗೆ ಪ್ರಾಯೋಗಿಕವಾಗಿ ಚಾಮರಾಜನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು ಸೇರಿದಂತೆ 11 ಜಿಲ್ಲೆಗಳಲ್ಲಿ ತಲಾ ಒಂದು ತಾಲ್ಲೂಕಿನಲ್ಲಿ ಆರಂಭಿಸಿದ್ದ ‘ಸುಜಲ–3’ ಯೋಜನೆಯನ್ನು ಈ ವರ್ಷದಿಂದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.

ಈ ಯೋಜನೆಯಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿ, ಮಳೆ ನೀರು ಇಂಗಿಸುವುದು, ಕೃಷಿ ಭೂಮಿಗೆ ನೆರವು ನೀಡಲಾಗುತ್ತಿದೆ. ಪ್ರತಿ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ ಶೇ 30ರಷ್ಟು (ಸುಮಾರು ₹100 ಕೋಟಿ), ವಿಶ್ವಬ್ಯಾಂಕ್ ಶೇ 70ರಷ್ಟು ಅನುದಾನ ನೀಡಲಿದ್ದು, ಪ್ರತಿ ಜಿಲ್ಲೆಯಲ್ಲಿ 10ರಿಂದ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಅನುಷ್ಠಾನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT