ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಭಾವ’ಕ್ಕೆ ಸಿಲುಕಿತೆ ಸಿ.ಟಿ.ರವಿ ಕಾರು ಅಪಘಾತ ಪ್ರಕರಣ?

ಕುಣಿಗಲ್‌ನ ಉರ್ಕೇಹಳ್ಳಿ ಗೇಟ್‌ ಬಳಿ ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಹೊಡೆದ ಘಟನೆ
Last Updated 20 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ತುಮಕೂರು: ಕುಣಿಗಲ್ ತಾಲ್ಲೂಕಿನ ಉರ್ಕೇಹಳ್ಳಿ ಗೇಟ್‌ ಬಳಿ ಶಾಸಕ ಸಿ.ಟಿ.ರವಿ ಅವರಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ದುರ್ಮರಣಕ್ಕೆ ತುತ್ತಾದ ಪ್ರಕರಣವು ‘ಪ್ರಭಾವಿ’ಗಳ ಒತ್ತಡಕ್ಕೆ ಸಿಲುಕಿ ದಾರಿ ತಪ್ಪುತ್ತಿದೆಯೇ ಎಂಬ ಅನುಮಾನವು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಅಪಘಾತ ನಡೆದ ಸ್ಥಳದಲ್ಲಿ ಕಾರು ಚಾಲಕ ಆಕಾಶ್ ಹಾಜರಿದ್ದರೂ ಪೊಲೀಸರು ತಕ್ಷಣ ಬಂಧಿಸದಿರುವುದು, ರವಿ ವಿರುದ್ಧ ಮಾಧ್ಯಮಗಳ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಗಾಯಾಳು ಪುನೀತ್‌, ತಾವು ನೀಡಿದ ದೂರಿನಲ್ಲಿ ರವಿ ಅವರ ಹೆಸರನ್ನೇ ಉಲ್ಲೇಖಿಸದಿರುವುದು ಅನುಮಾನಗಳು ಹುಟ್ಟುವಂತೆ ಮಾಡಿದೆ.

ರಾತ್ರಿ 1.45ರ ಸುಮಾರಿನಲ್ಲಿ ಅಪಘಾತ ನಡೆದಿದೆ. ‘ಪೊಲೀಸರು ಮತ್ತು ಆಂಬುಲೆನ್ಸ್‌ನವರಿಗೆ ನಾನೇ ಕರೆ ಮಾಡಿದೆ’ ಎಂದು ರವಿ ಸಹ ತಿಳಿಸಿದ್ದಾರೆ. ಆಕಾಶ್ ಅವರನ್ನು ಪೊಲೀಸರು ಸ್ಥಳದಲ್ಲಿಯೇ ಬಂಧಿಸದೆ ದುರಂತ ನಡೆದ ಹಲವು ತಾಸುಗಳ ನಂತರ ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಅಪಘಾತ ನಡೆದಾಗಲೇ ಚಾಲಕನನ್ನು ಬಂಧಿಸಿ, ಗಾಯಾಳುಗಳಿಗೆ ಕೊಡಿಸಿದಂತೆಯೇ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು ಎನ್ನುವ ಆಕ್ಷೇಪದ ಮಾತುಗಳು ಕೇಳಿ ಬರುತ್ತಿವೆ.

‘ಅಪಘಾತದ ನಂತರ ಶವಗಳನ್ನು ಸಾಗಿಸುವವರೆಗೂ ಆಕಾಶ್ ಮತ್ತು ಸಿ.ಟಿ.ರವಿ ಸ್ಥಳದಲ್ಲಿಯೇ ಇದ್ದರು. ಆ ನಂತರ ರವಿ ಅವರ ಜೊತೆಯೇ ಆಕಾಶ್ ತೆರಳಿದರು. ಆಸ್ಪತ್ರೆಯಲ್ಲಿ ಆಕಾಶನನ್ನು ಬಂಧಿಸಿ ಕುಣಿಗಲ್‌ಗೆ ಕರೆತಂದೆವು. ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದರೇ ಇಲ್ಲವೇ ಎಂಬುದನ್ನು ಪತ್ತೆ ಹೆಚ್ಚಲು ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಕುಣಿಗಲ್ ಪೊಲೀಸರು ತಿಳಿಸಿದ್ದಾರೆ.

ರವಿ ಅಪಘಾತ ಸ್ಥಳದಲ್ಲಿ ಇದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರೂ ತಮ್ಮ ಜೊತೆ ಯಾರಿದ್ದರು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಪುನೀತ್ ನೀಡಿರುವ ದೂರಿನಲ್ಲಿ ರವಿ ಕಾರಿನಲ್ಲಿ ಇದ್ದರು ಎನ್ನುವ ಅಂಶವೇ ಇಲ್ಲ!

ಮೊದಲ ದೂರಿನ ಪ್ರತಿಯಲ್ಲಿ ರವಿ ಅವರ ಹೆಸರು ಉಲ್ಲೇಖವಾಗಿತ್ತು. ಆದರೆ ಅದನ್ನು ಪೊಲೀಸರಿಗೆ ನೀಡಲೇ ಇಲ್ಲ. ನಂತರ ಗಾಯಾಳುಗಳ ಪರ ವಕೀಲರು ಕೊಟ್ಟ ದೂರಿನ ಪ್ರತಿಯನ್ನು ಪೊಲೀಸರಿಗೆ ನೀಡಲಾಯಿತು ಎನ್ನುತ್ತವೆ ಮೂಲಗಳು.

ಈ ದೂರಿನಲ್ಲಿ ‘ಅತಿವೇಗ ಮತ್ತು ಅಜಾಗರೂಕವಾಗಿ ಹಾಸನ ಮಾರ್ಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ರಸ್ತೆಯ ಎಡ ಬದಿ ಕಾರು ನಿಲ್ಲಿಸಿಕೊಂಡಿದ್ದ ನಮಗೆ ಡಿಕ್ಕಿ ಹೊಡೆದಿದ್ದಾನೆ’ ಎಂದಷ್ಟೇ ಇದೆ. ಈ ಎಲ್ಲ ವಿದ್ಯಮಾನಗಳು ಪ್ರಕರಣದಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇದೆ ಎನ್ನುವ ಶಂಕೆಯನ್ನು ಮೂಡಿಸಿದೆ.

ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಾಲತಾಣಗಳಲ್ಲಿ ಆಕ್ರೋಶ

ಈ ಅಪಘಾತ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ’ರವಿ ಅವರು ಅಪಘಾತ ನಡೆದ ಸಮಯಲ್ಲಿ ಮಾನವೀಯವಾಗಿ ವರ್ತಿಸಿಲ್ಲ,ಇಂತಹ ರಾಜಕಾರಣಿಗಳಿಗೆ ಪಾಠ ಕಲಿಸಿ’ ಎಂದು ಬಹು ಮಂದಿ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕುಡಿದು ಕಾರು ಚಲಾಯಿಸಿ ಇಬ್ಬರು ಹಿಂದೂಗಳನ್ನು ಕೊಂದ ಸಿ.ಟಿ.ರವಿ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ಯುವ ಘಟಕಗಳ ಫೇಸ್‌ಬುಕ್‌ ಪುಟಗಳಲ್ಲಿ ಟೀಕಿಸಲಾಗಿದೆ.

 ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ

‘ಸಿ.ಟಿ.ರವಿ ಮದ್ಯಪಾನ ಮಾಡುವುದಿಲ್ಲ, ಕಾರು ಓಡಿಸಲು ಬರುವುದಿಲ್ಲ’ ಎಂದು ಹೇಳಿಕೆ ನೀಡಿರುವ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಆನಂದ್ ಸಿಂಗ್ ಅವರೂ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

‘ನನ್ನ ಪತಿ ಕಾಫಿಯನ್ನೇ ಕುಡಿಯಲ್ಲ, ಡ್ರಿಂಕ್ಸ್‌ ಹೇಗೆ ಮಾಡ್ತಾರೆ’ ಎನ್ನುವ ರವಿ ಅವರ ಪತ್ನಿಯ ಹೇಳಿಕೆ ಗೇಲಿಗೆ ಒಳಗಾಗಿದೆ. ಮದ್ಯ ಕುಡಿಯುವವರು ಕಾಫಿ ಕುಡಿಯಲೇಬೇಕೆಂಬ ನಿಯಮ ಇದೆಯೇ ಎಂದು ಪ್ರಶ್ನಿಸಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ಸಿ.ಟಿ.ರವಿ ಎದೆಗೆ ಹಾಗೂ ಚಾಲಕನ ತಲೆಗೆ ಪೆಟ್ಟು ಬಿದ್ದಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಾದ ಕಾರಣ ಅವರು ಬೆಂಗಳೂರಿಗೆ ತೆರಳಿದ್ದರು. ವಿಕ್ರಂ ಆಸ್ಪತ್ರೆಯಲ್ಲಿ ಚಾಲಕನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT