ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಇತಿಹಾಸ ಬಿಂಬಿಸುವ ಪ್ರದರ್ಶನ

Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಕಬ್ಬನ್‌ ಪಾರ್ಕ್ ಬಳಿಯಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿಜೂನ್‌ 6ರವರೆಗೆ ಪುರಾತನ ವಸ್ತುಗಳ ಪ್ರದರ್ಶನ ನಡೆಯಲಿದೆ. ಮೇ28 ರಿಂದ ಪ್ರಾರಂಭವಾಗಿರುವ ಪ್ರದರ್ಶನದಲ್ಲಿ ರಾಜ–ಮಹಾರಾಜರು ಬಳಸುತ್ತಿದ್ದ ವಸ್ತುಗಳು, ಸೈನಿಕರು ತೊಡುವ ಬಟ್ಟೆ, ಹಳೆಯ ಕಾಲದ ಪಾತ್ರೆಗಳು ಪ್ರದರ್ಶನಕ್ಕಿವೆ. ಪುರಾತನ ಶಿಲ್ಪಕಲೆ, ಚಿತ್ರಕಲೆ ಸೇರಿದಂತೆ ನಮ್ಮ ಇತಿಹಾಸದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಇನ್ನು ಹತ್ತು–ಹಲವು ಕುತೂಹಲ ಸಂಗತಿಗಳನ್ನು ಅರಿಯಲು ಈ ಪ್ರದರ್ಶನ ಉಪಯುಕ್ತ.

ಪ್ರದರ್ಶನದ ಮುಖ್ಯ ಭಾಗವಾಗಿ ಹಳೆಯ ಕಾಲದ ಶಿಲಾಕೃತಿಗಳ ಸಂಗ್ರಹ ಇಲ್ಲಿದೆ. ಇಲ್ಲಿ ಸುಮಾರು 6ನೇ ಶತಮಾನದಲ್ಲಿ ತಯಾರಿಸಲಾದ ಶಿಲ್ಪಕಲೆಗಳು, ಮೂರ್ತಿಗಳು ಕದಂಬರ ಕಾಲದಿಂದ ಪ್ರಾರಂಭವಾದ ಕೆತ್ತನೆಗಳಿಂದ 17ನೇ ಶತಮಾನದ ಮೈಸೂರು ರಾಜರ ಕಾಲದಲ್ಲಿ ಕೆತ್ತನೆಯಾದ ಶಿಲ್ಪ ಕಲಾಕೃತಿಗಳು ಇಲ್ಲಿವೆ. ಭಾರತ ಇತಿಹಾಸದಲ್ಲಿ ಯುದ್ಧಕ್ಕೆ ಬಳಸಲಾದ ಆಯುಧಗಳನ್ನು ಕಾಣಬಹುದಾಗಿದೆ. ಹಳೆಯ ಕಾಲದಲ್ಲಿ ಮಣ್ಣಿನಿಂದ ಮಾಡಲಾದ ಮಡಿಕೆ, ಗೊಂಬೆ ಕೂಡ ಗಮನ ಸೆಳೆಯುತ್ತವೆ.

ಮತ್ತೊಂದೆಡೆ ವೆಂಕಟಪ್ಪ ಅವರ ಚಿತ್ರಕಲೆಗಳು ಕೈಬೀಸಿ ಕರೆಯುತ್ತವೆ. ಇಲ್ಲಿ ಅನೇಕ ವಿನ್ಯಾಸದ ಹಾಗೂ ಹಲವಾರು ಶೈಲಿಯ ಚಿತ್ರಕಲೆಗಳನ್ನು ಗಮನಿಸಬಹುದಾಗಿದೆ. ಗ್ಯಾಲರಿಯ ಮೂರು ಮಹಡಿಗಳನ್ನು ಸುತ್ತು ಹಾಕಿದರೆ ನಾಡಿನ ಇತಿಹಾಸವನ್ನು ವ್ಯಾಪಕವಾಗಿ ಓದಿದಂತಾಗುತ್ತದೆ.

ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಮುಖ್ಯಸ್ಥೆ ಕಾವ್ಯಶ್ರೀ ಪ್ರದರ್ಶನ ಸಂದರ್ಭದಲ್ಲೇ ‘ಮೆಟ್ರೊ’ ಜೊತೆ ಮಾತಿಗೆ ಸಿಕ್ಕರು.

ಈ ಪ್ರದರ್ಶನದ ಮುಖ್ಯ ಉದ್ದೇಶ ಏನು?

ಇತಿಹಾಸದ ಪ್ರಾಮುಖ್ಯತೆಯನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ ಈ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಇದರಿಂದಾಗಿ ಹಲವಾರು ಕಲಾವಿದರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಬಹುದು. ಕಲಾವಿದರಿಗೆ ಒಂದು ವೇದಿಕೆ ದೊರೆಯುತ್ತದೆ ಹಾಗೂ ನಮ್ಮ ಸಂಸ್ಕ್ರತಿಯ ಪ್ರಾಮುಖ್ಯತೆ ಜನರಿಗೆ ತಿಳಿಯುತ್ತದೆ.

ಈ ಸಲ ಜನರ ಪ್ರತಿಕ್ರಿಯೆ ಹೇಗಿದೆ?

ಉತ್ತಮ ಪ್ರತಿಕ್ರಿಯೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಜನರನ್ನು ಸೆಳೆಯುವಲ್ಲಿ ನಾವು ಸಫಲರಾಗಿದ್ದೇವೆ. ದಿನಕ್ಕೆ 400 ರಿಂದ 600 ಜನ ಬರುತ್ತಿದ್ದಾರೆ. ಹಾಗೆ ವಾರದ ಕೊನೆಯಲ್ಲಿ ಸಂಖ್ಯೆ 800ರವರೆಗೂ ಏರುತ್ತದೆ.

ಎಷ್ಟು ತರಹದ ಹಳೆಯ ಕಾಲದ ವಸ್ತುಗಳಿವೆ?

ಸುಮಾರು ಸಾವಿರಕ್ಕೂ ಹೆಚ್ಚು ಪ್ರಾಚೀನ ಕಾಲದ ವಸ್ತುಗಳು ನಮ್ಮಲ್ಲಿವೆ. 100 ವರ್ಷಕ್ಕೂ ಮೀರಿದ ಪಾತ್ರೆಗಳನ್ನು ಸಂಗ್ರಹಿಸಿದ್ದೇವೆ. ಇದರ ಸಂಗ್ರಹಣೆಗಾಗಿ ನಮ್ಮಲ್ಲಿ ಪ್ರತ್ಯೇಕವಾದ ತಂಡ ಇದ್ದು ಪಾತ್ರೆಗಳು ಹಾಗೂ ವಿವಿಧ ತರಹದ ಆಯುಧಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ.

ಪ್ರಾಚೀನ ಕಾಲದ್ದು ಎನ್ನುವಂಥ ಯಾವ ಯಾವ ವಿಶೇಷ ವಸ್ತುಗಳಿವೆ?

ರಾಜ, ಮಹಾರಾಜರು ಯುದ್ಧದಲ್ಲಿ ಬಳಸುತ್ತಿದ್ದ ಆಯುಧಗಳು,ಸೈನಿಕರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು,ಯುದ್ಧದ ಸಮಯದಲ್ಲಿ ತೊಡುತ್ತಿದ್ದಂತಹ ಧಿರಿಸುಗಳಿವೆ. ದಿನಬಳಕೆಯ ವಸ್ತುಗಳಾದ ಮಡಿಕೆ, ಕುಡಿಕೆ ಹಾಗೂ ಇನ್ನೂ ಹತ್ತು–ಹಲವು ವಸ್ತುಗಳು ನಮ್ಮಲ್ಲಿವೆ.

ಹೊಸ ಯೋಜನೆ ಏನಾದರೂ ಇದೆಯೇ?

ಕಟ್ಟಡದ ನವೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕ ಕೂಡಲೇ ಕಟ್ಟಡದಲ್ಲಿ ಅಗತ್ಯವಾದ ಬದಲಾವಣೆ ಮಾಡುತ್ತೇವೆ. ಹಾಗೆಯೇ ಪ್ರದರ್ಶನದ ವಿನ್ಯಾಸವನ್ನು ಕೂಡಾ ಬದಲಾವಣೆ ಮಾಡಬೇಕೆಂದುಕೊಂಡ್ಡಿದ್ದೇವೆ.
ಈ ಕಾರ್ಯಕ್ರಮದ ಮೂಲಕ ಭಾರತದ ಇತಿಹಾಸವನ್ನು ಯುವ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಾಚ್ಯವಸ್ತು ಸಂಗ್ರಾಲಯ ಮತ್ತು ಪರಂಪರೆ ಇಲಾಖೆಗೆ ನೀವು ಕೂಡಾ ಕೊಡುಗೆ ನೀಡಬಹುದು. ನಿಮ್ಮ ಮನೆಯಲ್ಲಿರುವ ಹಳೆಯ(50 ವರ್ಷ ಹಿಂದಿನ) ಪಾತ್ರೆ, ಆಯುಧ ಮತ್ತು ನಮ್ಮ ಇತಿಹಾಸದ ಪ್ರಾಧಾನ್ಯತೆ ಬಿಂಬಿಸುವ ವಸ್ತುಗಳಿದ್ದರೆ ವೆಂಕಟಪ್ಪ ಗ್ಯಾಲರಿಗೆ ಕೊಡುಗೆ ನೀಡಬಹುದು. ಇದರಿಂದ ಪ್ರದೇಶದ ಪೂರ್ವಚರಿತ್ರೆ ಯುವಜನಾಂಗಕ್ಕೆ ತಿಳಿಯಲು ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT