ಸೋಮವಾರ, ಆಗಸ್ಟ್ 19, 2019
22 °C
ನೆರೆ ಹಾವಳಿ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜನೆ

ಇದೇ 17–18ರಂದು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ

Published:
Updated:

ಬೆಂಗಳೂರು: ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಆ.17 ಮತ್ತು 18ಕ್ಕೆ ನಡೆಯಲಿದ್ದು, ರಾಜ್ಯದ ವಿವಿಧೆಡೆ ನೆರೆ ಹಾವಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ. 

ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಎಲ್. ಹನುಮಂತಯ್ಯ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ. ಅತ್ಯಂತ ಸರಳವಾಗಿ ಆಚರಿಸಲು ಕಾರ್ಯಾಕಾರಿಣಿ ಸಮಿತಿ ತೀರ್ಮಾನಿಸಿದ್ದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ರದ್ದು ಮಾಡಲಾಗಿದೆ’ ಎಂದು ತಿಳಿಸಿದರು. 

‘₹15 ಲಕ್ಷ ವೆಚ್ಚದಲ್ಲಿ ಸಮ್ಮೇಳನ ಮಾಡಲಾಗುತ್ತದೆ. 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿಸುವ ಸಲುವಾಗಿ ಪರಿಷತ್ತು ಹತ್ತು ದಲಿತ ಸಂಪುಟಗಳನ್ನು ಹೊರತರಲು ನಿರ್ಧರಿಸಿದ್ದು, ಇದರಲ್ಲಿ ಐದು ಸಂಪುಟಗಳು ಬಿಡುಗಡೆಯಾಗುತ್ತವೆ’ ಎಂದು ಹೇಳಿದರು.

‘ದಲಿತ ಸಾಂಸ್ಕೃತಿಕ ಚಿಂತನೆ, ದಲಿತ ಸಾಹಿತ್ಯ' ಸೇರಿದಂತೆ ಹಲವು ಗೋಷ್ಠಿಗಳು ನಡೆಯಲಿದ್ದು ನೂರಕ್ಕೂ ಅಧಿಕ ಸಾಹಿತಿಗಳು, ಕವಿಗಳು, ಲೇಖಕರು ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

ನೆರೆ ಪರಿಹಾರ: ‘ಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಪರಿಷತ್ತಿನ ಸಿಬ್ಬಂದಿ ಹಾಗೂ ಪದಾಧಿಕಾರಿಗಳು ಒಂದು ದಿನದ ವೇತನವನ್ನು ಬಿಡಲು ನಿರ್ಧರಿಸಿದ್ದು, ಒಟ್ಟು ₹4 ಲಕ್ಷ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ತಿಳಿಸಿದರು. 

ಮಾಧ್ಯಮಗೋಷ್ಠಿಯಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ರಾಜ್ಯ ಸಂಚಾಲಕ ಪದ್ಮರಾಜ ದಂಡಾವತಿ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್, ಕವಿ ಸಿದ್ಧಲಿಂಗಯ್ಯ ಹಾಗೂ ಲೇಖಕಿ ಬಿ.ಟಿ. ಲಲಿತಾ ನಾಯಕ್ ಇದ್ದರು.

Post Comments (+)