ಬುಧವಾರ, ಜನವರಿ 22, 2020
18 °C

ಭಕ್ತರ ಬೆನ್ನ ಮೇಲೆ ದಲಿತ ಪೂಜಾರಿ ನಡಿಗೆ: ದಂಡಿ ದುರ್ಗಮ್ಮ ಕಾರ್ತಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ (ದಾವಣಗೆರೆ): ಜಾತಿ, ಲಿಂಗ ಭೇದವಿಲ್ಲದೆ ಭಕ್ತರು ಸಾಲು ಸಾಲಾಗಿ ಬೋರಲಾಗಿ ಮಲಗಿದ್ದರು. ದೇವರ ಕೇಲು (ಪೂಜಾ ಸಾಮಗ್ರಿ ಉಳ್ಳ ಮಡಿಕೆ) ಹೊತ್ತ ದಲಿತ ಪೂಜಾರಿ ಭಕ್ತರ ಬೆನ್ನ ಮೇಲೆ ಹೆಜ್ಜೆಹಾಕುತ್ತಿದ್ದರು. ಪಾದಸ್ಪರ್ಶ ಪಡೆದ ಭಕ್ತರ ಮುಖದಲ್ಲಿ ಕೃತಜ್ಞತಾ ಭಾವ ಕಾಣುತ್ತಿತ್ತು.

ಸಮೀಪದ ಅರಸೀಕೆರೆ ಗ್ರಾಮದಲ್ಲಿ ದಂಡಿ ದುರ್ಗಮ್ಮದೇವಿ ಜಾತ್ರೆಯ ಕೊನೆಯ ದಿನವಾದ ಭಾನುವಾರ ಕಂಡುಬಂದ ದೃಶ್ಯಗಳಿವು.

ದೇವರ ಕೇಲುಗಳನ್ನು ಹೊತ್ತ ದಲಿತ ಪೂಜಾರಿ ಪಾದಸ್ಪರ್ಶದಿಂದ ಕಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು.

ದೇಗುಲದಿಂದ ದಂಡಿನ ದುರ್ಗಮ್ಮ ದೇವಿ ಉತ್ಸವ ಮೂರ್ತಿಯನ್ನು 2 ಕಿ.ಮೀ. ದೂರವಿರುವ ಹೊಳೆಗೆ ಭಜನೆ, ಮಂಗಳವಾದ್ಯಗಳೊಂದಿಗೆ ಗಂಗಾ ಪೂಜೆಗೆ ಕರೆ ತರಲಾಯಿತು. ಪೂಜೆ ಮುಗಿಸಿ ದೇವಿಯ ಕೇಲು ಹೊತ್ತ ಇಬ್ಬರು ಪೂಜಾರಿಗಳು ದಾರಿಯುದ್ದಕ್ಕೂ ಮಲಗಿದ್ದ ಭಕ್ತರ ಮೈಮೇಲೆ ನಡೆಯುತ್ತಾ ಸಾಗಿದರು. ದೇಗುಲದವರೆಗೂ ಪೂಜಾರಿಯ ಪಾದ ನೆಲಕ್ಕೆ ಸೋಕದಂತೆ ಭಕ್ತರು ಮಲಗಿದ್ದರು. ಪಾದ ಸ್ಪರ್ಶ ಸಿಗದ ಕೆಲ ಭಕ್ತರು ಪುನಃ ಮಲಗಿ ಬೆನ್ನು ತುಳಿಸಿಕೊಂಡರು.

‘ದೀರ್ಘ ಕಾಲದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದೆ. ಸ್ನೇಹಿತರೊಬ್ಬರ ಸಲಹೆ ಮೇರೆಗೆ ಜಾತ್ರೆಯಲ್ಲಿ ಅಡ್ಡ ಮಲಗುತ್ತೇನೆ ಎಂದು ಹರಕೆ ಹೊತ್ತಿದ್ದೆ. ಹರಕೆ ತೀರಿಸಲು ಬಂದಿದ್ದೆ’ ಎನ್ನುತ್ತಾರೆ ಚಿಕ್ಕಮಗಳೂರು ಮೂಲದ ಭಕ್ತ ಶಶಿಕಾಂತ.

‘ದಲಿತ ಪೂಜಾರಿಗಳ ಪಾದ ಸ್ಪರ್ಶ ಮಾಡಿಸಿಕೊಂಡರೆ ದೇವಿಯ ಪಾದ ಸ್ಪರ್ಶವಾದಷ್ಟೇ ಪುಣ್ಯ ಬರುತ್ತದೆ. ಇದರಿಂದ ಕಾಯಿಲೆ, ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಹರಕೆ ತೀರಿಸುತ್ತಾರೆ’ ಎಂದು ಅರಸೀಕೆರೆ ಗ್ರಾಮದ ವೈ.ಡಿ ಅಣ್ಣಪ್ಪ ತಿಳಿಸಿದರು.

ಬಲಿ ನೀಡದಂತೆ ಕಟ್ಟೆಚ್ಚರ: ಕಾರ್ತಿಕೋತ್ಸವದ ಅಂಗವಾಗಿ ದೇವಿಯ ಗಂಗಾ ಪೂಜೆ ನಂತರ ಪೂಜಾರಿಗಳ ನಡಿಗೆ ಆರಂಭಗೊಂಡ ಹೆಜ್ಜೆಯಿಂದ ಕೊನೆ ಹೆಜ್ಜೆಯವರೆಗೂ ಸಾವಿರಾರು ಸಂಖ್ಯೆಯಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡಲಾಗುತ್ತಿತ್ತು. ಗ್ರಾಮದ ಕರಿಗಲ್ಲಿನಿಂದ ಆರಂಭವಾಗುತ್ತಿದ್ದ ಪ್ರಾಣಿ ಬಲಿ ದೇವಸ್ಥಾನದ ದಾರಿಯುದ್ದಕ್ಕೂ ನಡೆಯುತ್ತಿತ್ತು. ಪ್ರಾಣಿ ಬಲಿ ನಿಷೇಧ ಕಾನೂನು ಜಾರಿಯಾಗಿರುವುದರಿಂದ ಹಲವು ವರ್ಷಗಳಿಂದ ಪ್ರಾಣಿ ಬಲಿಗೆ ತಡೆಯೊಡ್ಡಲಾಗಿದೆ. ಈ ವರ್ಷವೂ ಪ್ರಾಣಿ ಬಲಿ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು