ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯಲ್ಲಿ ಮತ್ತೊಂದು ಬಿಳಿ ಜಿಂಕೆ ಪತ್ತೆ

Last Updated 13 ಏಪ್ರಿಲ್ 2019, 12:00 IST
ಅಕ್ಷರ ಗಾತ್ರ

ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಅಪರೂಪದ ಬಿಳಿ ಜಿಂಕೆ ಪತ್ತೆಯಾಗಿದೆ.

ಮೈಮೇಲೆ ಬಿಳಿ ಬಣ್ಣದ ಚುಕ್ಕಿಯುಳ್ಳ ಜಿಂಕೆ ಒಂದು ವಾರದಿಂದ ಕಾಣಿಸಿಕೊಳ್ಳುತ್ತ ಸಫಾರಿಗೆ ಬರುತ್ತಿರುವ ಪ್ರವಾಸಿಗರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಮನ ಸೆಳೆಯುತ್ತಿದೆ.

2017ರ ಮೇನಲ್ಲೂ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹಾಗೂ ಕಬಿನಿ ಹಿನ್ನೀರಿನಲ್ಲಿ ದೊಡ್ಡ ಜಿಂಕೆಯ ಗುಂಪಿನಲ್ಲಿ ಬಿಳಿ ಬಣ್ಣದ ಜಿಂಕೆ ಪ್ರತ್ಯಕ್ಷವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ನಾಗರಹೊಳೆ ಅರಣ್ಯವು ಕೊಡಗು ಹಾಗೂ ಮೈಸೂರು ಜಿಲ್ಲೆಗಳ ನಡುವೆ ವಿಸ್ತರಿಸಿದ್ದು, ಮತ್ತೊಂದು ಬಿಳಿ ಜಿಂಕೆ ಮರಿ ಪತ್ತೆಯಾಗಿರುವುದು ವನ್ಯಜೀವಿ ಪ್ರಿಯರ ಕುತೂಹಲ ಮತ್ತಷ್ಟು ಇಮ್ಮಡಿಗೊಳಿಸಿದೆ. ಜತೆಗೆ, ಈ ಬಿಳಿ ಜಿಂಕೆ ಸಂತತಿ ಏನಾದರೂ ಹೆಚ್ಚಾಯಿತೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ. ಹಿಂದೊಮ್ಮೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ಬಿಳಿ ಜಿಂಕೆ ಕಾಣಿಸಿಕೊಂಡಿತ್ತು.

ಕಳೆದ ವಾರ ವಿರಾಜಪೇಟೆಯ ವನ್ಯಜೀವಿ ಛಾಯಾಗ್ರಾಹಕ ವಿಷು ನಾಣಯ್ಯ ಅವರು, ನಾಗರಹೊಳೆಗೆ ಕೊಡಗು ಭಾಗದ ಕಡೆಯಿಂದ ಸಫಾರಿಗೆ ತೆರಳಿದ್ದರು. ಆಗ ಸಾಮಾನ್ಯ ಜಿಂಕೆಯೊಂದಿಗೆ ಅಪರೂಪದ ಜಿಂಕೆಯೂ ಪತ್ತೆಯಾಗಿದೆ. ಅಚ್ಚರಿಯಿಂದ ಅದರ ಚಲನವಲನವನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಈಗ ಕಾಣಿಸಿಕೊಂಡಿರುವ ಜಿಂಕೆ ಪೂರ್ಣ ಪ್ರಮಾಣದಲ್ಲಿ ಬಿಳಿ ಆಗಿಲ್ಲ. ಸ್ವಲ್ಪ ಕಂದು ಮಿಶ್ರಿತವಾಗಿ ಅದರ ಮೇಲೆ ಬಿಳಿ ಚುಕ್ಕಿಗಳಿವೆ. ಹಿಂಡು ಹಿಂಡಾಗಿ ಸಾಗುವ ಜಿಂಕೆಗಳೊಂದಿಗೆ ಈ ಮರಿಯೂ ಹೆಜ್ಜೆ ಹಾಕುತ್ತಿದೆ.

‘ನಾನು ಬಿಳಿ ಚುಕ್ಕಿಯ ಜಿಂಕೆಯನ್ನು ಎಂದೂ ಕಂಡಿರಲಿಲ್ಲ. ಅದರ ಕಣ್ಣು ಸಾಮಾನ್ಯ ಜಿಂಕೆಯಂತೆ ಕಪ್ಪು ಬಣ್ಣದಲ್ಲ. ಕೆಂಪು ಮಿಶ್ರತವಾಗಿತ್ತು. ಅಪರೂಪಕ್ಕೆ ಒಮ್ಮೆ ಕಾಣಿಸಿಕೊಳ್ಳುತ್ತಿದೆ. ಹಲವು ಹರ್ಷಗಳ ಹಿಂದೆ ಗುಜರಾತ್‌ನ ಅರಣ್ಯದಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತ್ತು. ನಾಗರಹೊಳೆಯಲ್ಲಿ ಕಪ್ಪು ಚಿರತೆಯೂ ಒಂದಿದೆ’ ಎಂದು ವಿಷು ನಾಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಲನಿನ್‌ (ವರ್ಣದ್ರವ್ಯ) ದೇಹದಲ್ಲಿ ಹೆಚ್ಚಾದರೆ ಪ್ರಾಣಿಗಳು ಬಿಳಿ ಬಣ್ಣದಲ್ಲಿ ಜನಿಸುತ್ತವೆ. ಅದು ಕಡಿಮೆಯಿದ್ದರೆ ಕಪ್ಪು ಬಣ್ಣದಲ್ಲಿ ಪ್ರಾಣಿಗಳು ಜನಿಸುತ್ತವೆ. ಇದು ಜನಿಸುವ ಪ್ರಕ್ರಿಯೆ. ಇತ್ತೀಚೆಗೆ ಜಿಂಕೆ, ಕಾಡೆಮ್ಮೆ, ಚಿರತೆ ಸೇರಿ ಹಲವು ಪ್ರಾಣಿಗಳು ಬಣ್ಣ ಬದಲಿಸಿ ಹುಟ್ಟಿರುವ ನಿದರ್ಶನವಿದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT