ನಾರಾಯಣ ಗುರು ಸ್ಮರಿಸದಿರುವುದಕ್ಕೆ ಬಿ.ಕೆ.ಹರಿಪ್ರಸಾದ್ ವೇದಿಕೆಯಲ್ಲೇ ಅಸಮಾಧಾನ

7

ನಾರಾಯಣ ಗುರು ಸ್ಮರಿಸದಿರುವುದಕ್ಕೆ ಬಿ.ಕೆ.ಹರಿಪ್ರಸಾದ್ ವೇದಿಕೆಯಲ್ಲೇ ಅಸಮಾಧಾನ

Published:
Updated:

ಕನ್ಯಾಡಿ- ಉಜಿರೆ (ದಕ್ಷಿಣ ಕನ್ನಡ): ಇಲ್ಲಿನ ಶ್ರೀರಾಮ‌ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ನಡೆಯುತ್ತಿರುವ ರಾಷ್ಟ್ರೀಯ ಧರ್ಮ ಸಂಸತ್ ವೇಳೆ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸ್ಮರಿಸದೇ ಇರುವುದಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

‘ನಾರಾಯಣ ಗುರುಗಳ ತತ್ವದ ನೆಲೆಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಕ್ಷೇತ್ರವನ್ನು ಸ್ಥಾಪಿಸಿದ್ದರು. ಅದೇ ಹಾದಿಯಲ್ಲಿ ಕ್ಷೇತ್ರ ಸಾಗುತ್ತಿದೆ. ಆದರೆ, ಧರ್ಮ‌‌ ಸಂಸತ್ ಕಾರ್ಯ್ರಕಮದ ಆಹ್ವಾನ ಪತ್ರಿಕೆಯಲ್ಲಿ ಎಲ್ಲಿಯೂ ನಾರಾಯಣ ಗುರುಗಳ ಬಗ್ಗೆ ಉಲ್ಲೇಖವಿಲ್ಲ. ಅವರ ವಿಚಾರ ಪ್ರಸ್ತಾಪಿಸಿಲ್ಲ. ವೇದಿಕೆಯಲ್ಲೂ ಅವರ ಸ್ಮರಣೆ ಇಲ್ಲ. ಭಾವಚಿತ್ರವೂ ಇಲ್ಲ. ಇದು ನನಗೆ ನೋವು ತಂದಿದೆ' ಎಂದರು.

' ನಾರಾಯಣ ಗುರು ನಮ್ಮ ಗುರು. ಅವರು ನೀಡಿದ ಶಕ್ತಿಯಿಂದ ನಮ್ಮ ಸಮಾಜ ಅಸ್ಪೃಶ್ಯತೆಯ ನೋವಿನಿಂದ ದೂರವಾಗಿದೆ. ಬಡ ಕುಟುಂಬದಿಂದ ಬಂದ ನನ್ನಂತಹ ವ್ಯಕ್ತಿ ಸಂಸತ್ತಿನ ಸದಸ್ಯನಾಗುವುದು ಸಾಧ್ಯವಾಗಿದೆ. ಶಿಕ್ಷಣದ ಮೂಲಕ ಅರಿವಿನ ಬೆಳಕನ್ನು ಬಿತ್ತಿದ ನಾರಾಯಣ ಗುರುಗಳ ಸ್ಮರಿಸುವುದು ನಮ್ಮ ಕರ್ತವ್ಯ' ಎಂದರು.

ಒಂದೇ ಕುಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ತತ್ವವನ್ನು ನಾರಾಯಣ ಗುರುಗಳು ಸಾರಿದರು. ಆ ಬೆಳಕಿನಲ್ಲಿ ದೇಶ ಸಾಗಬೇಕು.ಬಸವಣ್ಣ, ಮಹಾತ್ಮ ಫುಲೆ, ಯೋಗಿ ವೇಮನ ಸೇರಿದಂತೆ ಸಹಬಾಳ್ವೆ, ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ನೀಡಿದ ಸಂದೇಶಗಳ ತಳಹದಿಯಲ್ಲಿ ನವ ಸಮಾಜ ನಿರ್ಮಸುವ ಪ್ರಯತ್ನ ಧಾರ್ಮಿಕ ಮುಖಂಡರಿಂದ ಆಗಬೇಕು ಎಂದರು.
 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !