ಬುಧವಾರ, ಸೆಪ್ಟೆಂಬರ್ 18, 2019
21 °C

ಧರ್ಮಸ್ಥಳ: 48ನೇ ಸಾಮೂಹಿಕ ವಿವಾಹ

Published:
Updated:
Prajavani

ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ಮದುವೆಯ ಸಂಭ್ರಮ, ಸಡಗರ. 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ. ಸಂಜೆ 6.48 ಕ್ಕೆ ಗೋಧೂಳಿ ಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 102 ಜೋಡಿ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು.

ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ (ತಮ್ಮ ನಿವಾಸದಲ್ಲಿ) ವಧುವಿಗೆ ಸೀರೆ, ರವಿಕೆ ಹಾಗೂ ವರನಿಗೆ ಶಾಲು, ಧೋತಿ ನೀಡಿ ಹರಸಿದರು. ನೂತನ ವಧು-ವರರು ಹೆಗ್ಗಡೆಯವರಿಗೆ ಫಲ ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆದರು.

ಬಳಿಕ ಸಂಜೆ ಗಂಟೆ 5ಕ್ಕೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ವಧು-ವರರು ಪ್ರದಕ್ಷಿಣೆ ಹಾಕಿ, ಮದುವೆಯ ಸಭಾಭವನ ಅಮೃತವರ್ಷಿಣಿ ಪ್ರವೇಶಿಸಿದರು.

ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಣೆ ಮಾಡಿದರು. ವೇದ ಘೋಷದೊಂದಿಗೆ ಮಂಗಳವಾದ್ಯ ಮೊಳಗಿದಾಗ ಒಂದೇ ಮುಹೂರ್ತದಲ್ಲಿ ಆಯಾ ಜಾತಿ - ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ 6.48 ರ ಶುಭ ಮುಹೂರ್ತದಲ್ಲಿ ವಧು-ವರರು ಹಾರ ವಿನಿಮಯ ಮಾಡಿ, ಮಂಗಲಸೂತ್ರ ಧಾರಣೆ ಮಾಡಿಕೊಂಡರು.

1982 ರಲ್ಲಿ 88 ಜೋಡಿ ಸಾಮೂಹಿಕ ವಿವಾಹದೊಂದಿಗೆ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಪ್ರಾರಂಭ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ಏಪ್ರಿಲ್, ಮೇನಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತದೆ.

Post Comments (+)