ಧಾರವಾಡ ಸಾಹಿತ್ಯ ಸಂಭ್ರಮ 18ರಿಂದ

7
ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಸಮರ್ಪಣೆ; ಆನ್‌ಲೈನ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ

ಧಾರವಾಡ ಸಾಹಿತ್ಯ ಸಂಭ್ರಮ 18ರಿಂದ

Published:
Updated:
Prajavani

ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಏಳನೇ ಆವೃತ್ತಿ ಇದೇ 18ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡಲಿದ್ದಾರೆ. ಈ ವರ್ಷದ ಸಂಭ್ರಮವನ್ನು ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಸಮರ್ಪಿಸಲಾಗುತ್ತಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಪಾಟೀಲ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ನಡೆಯಲಿರುವ ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಈ ಹಿಂದಿನ ಆರು ಆವೃತ್ತಿಗಳ ಚಿಂತನೆಯ ಚೌಕಟ್ಟನ್ನು ಆಧರಿಸಿ ಆಯೋಜಿಸಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಟ್ಟು 17 ಗೋಷ್ಠಿಗಳು ಜರುಗಲಿವೆ. ಪ್ರತಿದಿನ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಡಾ.ಗಿರಡ್ಡಿ ನೆನಪಿನಲ್ಲಿ ಒಂದು ಸಾಂಸ್ಕೃತಿಕ ನೆನಪು ಎಂಬ ಗೋಷ್ಠಿ ಆಯೋಜಿಸಲಾಗಿದೆ. ತಂತ್ರಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ವಿವಿಧ ಜ್ಞಾನಶಾಖೆಗಳಲ್ಲಿ ತೊಡಗಿಸಿಕೊಂಡಿರುವ ಚಿಂತಕ ಶಿವ ವಿಶ್ವನಾಥನ್ ಅವರು ‘ರಾಷ್ಟ್ರೀಯತೆ: ಸಮಕಾಲೀನ ವಾಗ್ವಾದಗಳು’ ಕುರಿತು ಮಾತನಾಡಲಿದ್ದಾರೆ’ ಎಂದು ಹೇಳಿದರು.

‘ದಲಿತ ಸಾಹಿತ್ಯ ಮತ್ತು ಸಂಘಟನೆ ವಿಷಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ‘ಉಚಲ್ಯಾ’ ಖ್ಯಾತಿಯ ಮಹಾರಾಷ್ಟ್ರದ ಲಕ್ಷ್ಮಣ ಗಾಯಕವಾಡ, ದಲಿತ ಚಿಂತನೆಯ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷವಾಗಿರುವ ಸಂದರ್ಭದಲ್ಲಿ ಎರಡು ಗೋಷ್ಠಿಗಳು ಜರುಗಲಿವೆ’ ಎಂದರು.

ಕಿರಿಯ ಲೇಖಕರ ಪರಿಚಯ ಮತ್ತು ಅವರ ಸಮಸ್ಯೆಗಳನ್ನು ಚರ್ಚಿಸುವ ಪ್ರಯತ್ನ ಸಂಭ್ರಮದಲ್ಲಿ ನಡೆಯಲಿದೆ. ಪರಿಸರ ಕುರಿತ ಗೋಷ್ಠಿಗಳಲ್ಲಿ ಕೇರಳ ಮತ್ತು ಕೊಡಗು ಜಲಪ್ರಳಯ ಕುರಿತು ಚರ್ಚೆ ಇರುತ್ತದೆ. ಜನಪದ ಸಾಹಿತ್ಯದಲ್ಲಿ ತತ್ವಪದಗಳ ಪ್ರಾತ್ಯಕ್ಷಿಕೆ ಮತ್ತು ಶ್ರೀಕೃಷ್ಣ ಪಾರಿಜಾತ ಬಯಲಾಟದ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ. ಹಳೆಗನ್ನಡ ಸಾಹಿತ್ಯ ಕುರಿತು ‘ಯಶೋಧರ ಚರಿತೆ ಕಾವ್ಯದ ಗಮಕ– ವ್ಯಾಖ್ಯಾನ’ ಗೋಷ್ಠಿ ಇದೆ. ರಂಗಭೂಮಿಗೆ ಸಂಬಂಧಪಟ್ಟಂತೆ ‘ರಂಗಗೀತೆಗಳ ವಿಕಾಸ ಪ್ರಾತ್ಯಕ್ಷಿಕೆಯನ್ನು ಬಿ.ಜಯಶ್ರೀ ನಡೆಸಿಕೊಡಲಿದ್ದಾರೆ’ ಎಂದು ವಿವರಿಸಿದರು.

‘ಕಾವ್ಯ ಗೋಷ್ಠಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಬಾರಿ ‘ಜೀವನ ಅಂದರೆ...?’ ಪರಿಕಲ್ಪನೆ ಕುರಿತು ಕನ್ನಡದ ಪ್ರಮುಖ ನವೋದಯ ಕವಿಗಳು ದಾಖಲಿಸಿದ ಸಂವೇದನೆಯ ಕವಿತೆಗಳನ್ನು ಆರಿಸಿಕೊಂಡು ಅವುಗಳನ್ನು ಇಲ್ಲಿ ವಾಚಿಸಲಾಗುತ್ತಿದೆ’ ಎಂದರು.

‘ಈ ವರ್ಷದ ಪ್ರತಿ ಗೋಷ್ಠಿಗೂ ಪ್ರಾಯೋಜಕತ್ವ ಪಡೆಯಲಾಗಿದೆ. ಖರ್ಚನ್ನು ₹30 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಕಳೆದ ವರ್ಷ ₹35 ಲಕ್ಷ ಖರ್ಚಾಗಿತ್ತು’ ಎಂದರು.

‘ಆನ್‌ಲೈನ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ. ಭಾಗವಹಿಸಲು ಇಚ್ಛಿಸಿ ನೋಂದಣಿಗೆ ಅವಕಾಶ ಸಿಗದವರಿಗೆ, ಸಭಾಂಗಣದ ಹೊರಗೆ ಬೃಹತ್ ಎಲ್‌ಇಡಿ ಪರದೆ ವ್ಯವಸ್ಥೆ ಇರುತ್ತದೆ’ ಎಂದು ಪಾಟೀಲ ಮಾಹಿತಿ ನೀಡಿದರು.

**

ಮುಖ್ಯಾಂಶಗಳು

* ಸಂಭ್ರಮದಲ್ಲಿ 17 ಗೋಷ್ಠಿ

* ದಲಿತ, ಗಾಂಧೀ ಚಿಂತನೆಗಳ ಚರ್ಚೆ

* ಯುವ ಸಾಹಿತಿಗಳಿಗೆ ವೇದಿಕೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !