ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚ ಲೆಕ್ಕಪತ್ರ ವ್ಯತ್ಯಾಸ: ಉಗ್ರಪ್ಪ, ದೇವೇಂದ್ರಪ್ಪಸೇರಿ ನಾಲ್ವರಿಗೆ ನೋಟಿಸ್

ವೆಚ್ಚ ಕೋಶ
Last Updated 13 ಏಪ್ರಿಲ್ 2019, 15:11 IST
ಅಕ್ಷರ ಗಾತ್ರ

ಬಳ್ಳಾರಿ: ಲೋಕಸಭೆ ಚುನಾವಣಾ ವೆಚ್ಚ ಕೋಶ ನಿರ್ವಹಿಸಿದ ಲೆಕ್ಕಪತ್ರಗಳಿಗೂ ಹಾಗೂ ಅಭ್ಯರ್ಥಿಗಳಿಗೂ ನಿರ್ವಹಿಸಿದ ಲೆಕ್ಕಪತ್ರಗಳಿಗೂ ತಾಳೆಯಾಗದ ಕಾರಣ, ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ, ಬಿಜೆಪಿಯ ವೈ.ದೇವೇಂದ್ರಪ್ಪ, ಬಿಎಸ್ಪಿಯ ಕೆ.ಗೂಳಪ್ಪ ಮತ್ತು ಶಿವಸೇನೆ ಪಕ್ಷದ ಈಶ್ವರಪ್ಪ ಅವರಿಗೆ ವಿವರಣೆ ಕೇಳಿ ಶನಿವಾರ ನೋಟಿಸ್‌ ನೀಡಲಾಗಿದೆ.

ಅಭ್ಯರ್ಥಿಗಳು ಇದುವರೆಗೆ ಚುನಾವಣಾ ಪ್ರಚಾರಕ್ಕಾಗಿ ಮಾಡಿದ ವೆಚ್ಚ ಹಾಗೂ ಅದಕ್ಕೆ ಸಂಬಂಧಿಸಿ ನಿರ್ವಹಣೆ ಮಾಡಿದ ಲೆಕ್ಕಪತ್ರಗಳ ಪರಿಶೀಲನೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಮತ್ತು ಮನ್ವೀಶಕುಮಾರ್ ನೇತೃತ್ವದಲ್ಲಿ ನಡೆದ ಬಳಿಕ ನೋಟಿಸ್‌ ನೀಡಲಾಯಿತು.

ಚುನಾವಣಾ ವೆಚ್ಚ ಕೋಶದ ನೋಡಲ್ ಅಧಿಕಾರಿಗಳಾದ ಡಾ.ಸುನೀತಾ ಸಿದ್ರಾಂ ಹಾಗೂ ಎ.ಚನ್ನಪ್ಪ ಅವರಿಗೆ ಅಭ್ಯರ್ಥಿಗಳ ಪರವಾಗಿ ಆಗಮಿಸಿದ್ದ ಪ್ರತಿನಿಧಿಗಳು ಲೆಕ್ಕಪತ್ರಗಳನ್ನು ನೀಡಿದರು. ನಂತರ, ವೆಚ್ಚ ವೀಕ್ಷಕ ಸಿಬ್ಬಂದಿ ಅವುಗಳನ್ನು ಪರಿಶೀಲಿಸಿ ತಾವು ಲೆಕ್ಕ ಹಾಕಿದ್ದ ಅಂಕಿ–ಸಂಖ್ಯೆಗಳೊಂದಿಗೆ ಹೋಲಿಕೆ ಮಾಡಿ ನೋಡಿದರು.

ಇನ್ನೆರಡು ಬಾರಿ: ಚುನಾವಣೆ ಮುಗಿಯುವದರೊಳಗೆ ವೆಚ್ಚ ಲೆಕ್ಕ ಪತ್ರಗಳ ಪರಿಶೀಲನೆ ಇನ್ನೂ ಎರಡು ಬಾರಿ ನಡೆಯಲಿದೆ ಎಂದು ವೀಕ್ಷಕರು ಹೇಳಿದರು. ಅಭ್ಯರ್ಥಿಗಳು ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದ ಈ ಸಂದರ್ಭದಲ್ಲಿ ಸೂಚಿಸಿದರು.

ಭೇಟಿ, ಪರಿಶೀಲನೆ: ಬಳ್ಳಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರುವ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿ, ದೂರು ನಿರ್ವಹಣಾ ಕೋಶ ಮತ್ತು ವೋಟರ್ ಹೆಲ್ಪ್ ಲೈನ್, ಸಿ–ವಿಜಿಲ್ ಕೋಶ ಸೇರಿದಂತೆ ವಿವಿಧ ಸಮಿತಿಗಳಿಗೆ ಚುನಾವಣಾ ವೆಚ್ಚ ವೀಕ್ಷಕ ಮನ್ವೀಶಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನಡೆಸಿದರು.

ಮತದಾರರ ಚೀಟಿ, ಸಿ.ವಿಜಿಲ್‌ಗೆ ಸಂಬಂಧಿಸಿದಂತೆ ಇದುವರೆಗೆ ಬಂದಿರುವ ದೂರುಗಳು, ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು. ದೂರು ನಿರ್ವಹಣಾ ಕೋಶಕ್ಕೂ ಭೇಟಿ ನೀಡಿದ ಅವರು, ನೀತಿ ಸಂಹಿತೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳು, ವಿಲೇವಾರಿ ಕುರಿತು ಮಾಹಿತಿ ಪಡೆದರು.

ಚೆಕ್‌ಪೋಸ್ಟ್‌ಗಳ ಮೇಲೆ ನಿಗಾವಹಿಸಲು ಅಳವಡಿಸಲಾಗಿರುವ ಸಿಸಿಟಿವಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.ಮಾಧ್ಯಮ ಪ್ರಮಾಣೀಕರಣ ಸಮಿತಿಯ ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ವೆಚ್ಚವೀಕ್ಷಕರ ಮೆಲ್ವಿಚಾರಣಾಧಿಕಾರಿ ಮೈಲೇಶ ಬೇವೂರ್, ದೂರು ನಿರ್ವಹಣಾ ಕೋಶದ ಸುಧೀರ್, ಸಿ–ವಿಜಿಲ್‌ನ ನೋಡಲ್ ಅಧಿಕಾರಿ ಸುನೀತಾ, ರವಿ ರಾಠೋಡ, ಹೊನ್ನೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT