ಎಲ್ಲ ಕ್ಯಾನ್ಸರ್‌ಗೂ ಒಂದೇ ಔಷಧ ಸಿದ್ಧ

7
ಮೈಸೂರು ವಿಶ್ವವಿದ್ಯಾಲಯ ಹಾಗೂ ಚೀನಾದ ಸಿಂಗುವಾ ವಿ.ವಿ ವಿಜ್ಞಾನಿಗಳ ಮಹತ್ವದ ಸಂಶೋಧನೆ

ಎಲ್ಲ ಕ್ಯಾನ್ಸರ್‌ಗೂ ಒಂದೇ ಔಷಧ ಸಿದ್ಧ

Published:
Updated:
Deccan Herald

ಮೈಸೂರು: ಬಹುತೇಕ ಎಲ್ಲ ಬಗೆಯ ಕ್ಯಾನ್ಸರ್‌ಗಳಿಗೂ ಒಂದೇ ಔಷಧಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಆವಿಷ್ಕರಿಸಿದ್ದಾರೆ.

ಈ ಔಷಧಿಯನ್ನು ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಫಲ ಸಿಕ್ಕಿದೆ. ಮಾನವರ ಮೇಲೆ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ರಸಾಯನ ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್‌.ರಂಗಪ್ಪ, ಸಂಶೋಧಕರಾದ ಡಾ. ಸಿ.ಡಿ.ಮೋಹನ್‌, ಡಾ. ಆರ್‌.ಶೋಭಿತ್, ಡಾ. ಬಸಪ್ಪ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ‍ ಪ್ರೊ. ಪೀಟರ್ ಇ.ಲಾಬಿ ಅವರ ತಂಡವು ಈ ಸಂಶೋಧನೆ ನಡೆಸಿದೆ. ನೂರಕ್ಕೂ ಹೆಚ್ಚು ಕ್ಯಾನ್ಸರ್‌ ವಿಧಗಳಿಗೆ ಒಂದೊಂದು ರೀತಿಯ ಔಷಧಗಳಿವೆ. ಈ ಪರಿಕಲ್ಪನೆಯನ್ನು ಬದಲಿಸಿ ಎಲ್ಲದಕ್ಕೂ ಒಂದೇ ಔಷಧವನ್ನು ಪ್ರಯೋಗಿಸುವ ಮಹತ್ವದ ಸಂಶೋಧನೆ ಇದಾಗಲಿದೆ.

ಕ್ಯಾನ್ಸರ್‌ ವಿಧಗಳು ಹಾಗೂ ಅವುಗಳ ತೀವ್ರತೆಗೆ ಅನುಗುಣವಾಗಿ ಮೂರು ಮುಖ್ಯ ಚಿಕಿತ್ಸಾ ವಿಧಾನಗಳಿವೆ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಹಾಗೂ ರೇಡಿಯೊಥೆರಪಿ ಬಳಕೆಯಾಗುತ್ತಿವೆ. ಔಷಧದ ಮೂಲಕ ಗುಣಪಡಿಸುವ ವಿಧಾನವಾದ ಕಿಮೊಥೆರಪಿಯನ್ನು ಈ ತಂಡವು ಆಯ್ಕೆ ಮಾಡಿಕೊಂಡು ಔಷಧ ಕಂಡುಹಿಡಿದಿದೆ. ಸಾಮಾನ್ಯವಾಗಿ ಕ್ಯಾನ್ಸರ್‌ ಕೋಶಗಳು ಆರೋಗ್ಯವಂತ ಕೋಶಗಳಿಗಿಂತ ಬಹುಬೇಗನೇ ಬೆಳೆಯುತ್ತವೆ, ಹರಡುತ್ತವೆ. ಅಲ್ಲದೆ, ಈ ಕ್ಯಾನ್ಸರ್‌ ಕೋಶಗಳಿಗೆ ‘ಬಿಸಿಎಲ್‌–2 ಅಗೋನಿಸ್ಟ್‌ ಆಫ್‌ ಸೆಲ್‌ ಡೆತ್‌’ (BAD) ಎಂಬ ಪ್ರೋಟೀನ್‌ ರಕ್ಷಣೆ ನೀಡುತ್ತಿರುತ್ತದೆ. ಹಾಗಾಗಿ, ಇವು ಔಷಧಿಗೆ ಸ್ಪಂದಿಸುವುದಿಲ್ಲ. ವಿಜ್ಞಾನಿಗಳು ಸಂಶೋಧಿಸಿರುವ ಈ ಹೊಸ ಔಷಧಿಯು ನೇರವಾಗಿ ರಕ್ಷಣೆ ನೀಡುವ ಪ್ರೋಟೀನನ್ನೇ ನಾಶಗೊಳಿಸುತ್ತದೆ.

‘ಬಿಎಡಿ’ ಪ್ರೋಟೀನ್ ನಾಶವಾದ ಕೂಡಲೇ ಅದರ ಜತೆ ಇರುವ ಕ್ಯಾನ್ಸರ್‌ ಕೋಶ ತಾನಾಗೇ ಸಾಯುತ್ತದೆ. ಇದನ್ನು ಸಂಶೋಧನಾ ತಂಡವು ಇಲಿಗಳ ಮೇಲೆ ಪ್ರಯೋಗ ನಡೆಸಿದೆ. ‍‍ಪ್ರಯೋಗದಲ್ಲಿ ಕಡಿಮೆ ಪ್ರಮಾಣದ ಔಷಧಿಗೇ ಕ್ಯಾನ್ಸರ್‌ ಪೀಡಿತ ಕೋಶಗಳು ನಾಶವಾಗಿ, ಇಲಿಯು ಆರೋಗ್ಯವಂತವಾಗುವುದು ಕಂಡುಬಂದಿದೆ.

ಅಡ್ಡಪರಿಣಾಮ ಇಲ್ಲ: ‘ಕ್ಯಾನ್ಸರ್‌ಗೆ ನೀಡುವ ಕಿಮೊಥೆರಪಿ ಔಷಧಿಗಳಿಂದ ಅಡ್ಡಪರಿಣಾಮಗಳು ಹೆಚ್ಚು. ಭೇದಿ, ವಾಂತಿ, ಕೂದಲು ಉದುರುವುದು ಸಾಮಾನ್ಯ. ಅಲ್ಲದೆ, ಕ್ಯಾನ್ಸರ್‌ ಸಂಪೂರ್ಣ ಗುಣವಾಗುವುದೂ ಅನುಮಾನ. ಜತೆಗೆ, ಕಿಮೊಥೆರಪಿ ಔಷಧಿಗಳು ಕ್ಯಾನ್ಸರ್‌ ಕೋಶಗಳಷ್ಟೇ ಅಲ್ಲದೆ, ಆರೋಗ್ಯವಂತ ಕೋಶಗಳನ್ನೂ ನಾಶಪಡಿಸುತ್ತವೆ. ಆದರೆ, ಈ ಹೊಸ ಔಷಧವು ಕೇವಲ ‘ಬಿಎಡಿ’ ಪ್ರೋಟೀನ್‌ಗಳ ಮೇಲೆ ಮಾತ್ರ ದಾಳಿ ಮಾಡುವ ಕಾರಣ, ಈ ಪ್ರೋಟೀನಿಗೆ ಅಂಟಿಕೊಂಡಿರುವ ಕ್ಯಾನ್ಸರ್‌ ಕೋಶಗಳು ಸಾಯುತ್ತವೆ. ಆರೋಗ್ಯವಂತ ಕೋಶಗಳಲ್ಲಿ ಈ ಪ್ರೋಟೀನ್ ಇರುವುದೇ ಇಲ್ಲ. ಆದ್ದರಿಂದ ಅಡ್ಡಪರಿಣಾಮವೂ ಇರುವುದಿಲ್ಲ’ ಎಂದು ಪ್ರೊ.ರಂಗಪ್ಪ ವಿವರಿಸಿದರು.

ಈ ಸಂಶೋಧನೆಯ ಪ್ರಬಂಧವು ಅಮೆರಿಕದ ‘ಪ್ರೊಸೀಡಿಂಗ್ಸ್ ಆಫ್‌ ದಿ ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟಣೆಗಾಗಿ ಸ್ವೀಕೃತಗೊಂಡಿದೆ. ಈ ಔಷಧವನ್ನು ವಿಶ್ವದ ಪ್ರಮುಖ ಕ್ಯಾನ್ಸರ್‌ ತಜ್ಞ ವಿಜ್ಞಾನಿಗಳು ಪರಾಮರ್ಶಿಸಿ, ಮಾನವನ ಮೇಲೆ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮುಂದಿನ ಹಂತದಲ್ಲಿ ಸಂಶೋಧನೆ ಯಶಸ್ಸು ಕಂಡರೆ ಕ್ಯಾನ್ಸರ್‌ಗೆ ಪರಿಪೂರ್ಣ ಚಿಕಿತ್ಸೆ ಸಾಧ್ಯ ಎಂದು ತಿಳಿಸಿದರು.

ಔಷಧ ತಯಾರಿ ಹೇಗೆ?

ಭೌತವಿಜ್ಞಾನಿಗಳು ಯಾವುದೇ ಹೊಸ ಔಷಧವನ್ನು ಕಂಡುಹಿಡಿಯುವಾಗ ಆ ಔಷಧದ ಸೂತ್ರವನ್ನಷ್ಟೇ ಸಂಶೋಧಿಸುತ್ತಾರೆ. ಅದನ್ನು ಅಣುಬೀಜ ರಚನೆ (Molecular Structure) ಎನ್ನುತ್ತಾರೆ. ಈ ಸೂತ್ರವು ವೈದ್ಯಕೀಯ ಲೋಕಕ್ಕೆ ಒಪ್ಪಿಗೆಯಾದ ಮೇಲೆ ಔಷಧ ತಯಾರಿಕಾ ಕಂಪನಿಗಳು ಔಷಧವನ್ನು ತಯಾರಿಸುತ್ತವೆ.

ಕಿಮೊಥೆರಪಿ ಔಷಧಗಳನ್ನು ಸಾಮಾನ್ಯವಾಗಿ ದ್ರವ ರೂಪದಲ್ಲಿ ನೀಡಲಾಗುತ್ತದೆ. ಅದನ್ನು ವ್ಯಕ್ತಿಯ ರಕ್ತನಾಳಕ್ಕೆ ನೇರವಾಗಿ ಸೇರಿಸಲಾಗುತ್ತದೆ. ಕ್ಯಾನ್ಸರ್ ಔಷಧವು ಕ್ಯಾನ್ಸರ್ ಪೀಡಿತ ಕೋಶಗಳನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ಆರಂಭಿಸುತ್ತದೆ.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !