ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಶಿಕ್ಷಣ: ವಿ.ವಿಗಳಿಗೆ ಮತ್ತೆ ಅವಕಾಶ

Last Updated 9 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಧಾರವಾಡ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳಿಂದಾಗಿ ದೂರ ಶಿಕ್ಷಣ ವಿಭಾಗ ಮುಚ್ಚುವ ಭೀತಿ ಎದುರಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಕೆಲ ವಿಶ್ವವಿದ್ಯಾಲಯಗಳಿಗೆ ಒಂದು ವರ್ಷದೊಳಗಾಗಿ ರಾಷ್ಟ್ರೀಯ ಮಾನ್ಯತಾ ಮತ್ತು ಮೌಲ್ಯಾಂಕನ ಸಮಿತಿ (ನ್ಯಾಕ್) ನೀಡುವ ಶ್ರೇಯಾಂಕ ಪಡೆಯಲು ಅವಕಾಶ ನೀಡಲಾಗಿದೆ.

‘ಕವಿವಿ: ದೂರ ಶಿಕ್ಷಣ ವಿಭಾಗ ಮುಚ್ಚುವ ಭೀತಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸೆ.8ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿರುವ ವಿಶ್ವವಿದ್ಯಾಲಯಗಳಿಗೆ ಒಂದು ವರ್ಷದ ಅವಧಿಯನ್ನು ಯುಜಿಸಿ ನೀಡಿ ಅಧಿಸೂಚನೆ ಹೊರಡಿಸಿದೆ.

ಕೆಲವೆಡೆ ಅವ್ಯವಹಾರಗಳು ನಡೆದ ಆರೋಪಗಳು ಕೇಳಿಬಂದಿದ್ದವು. ಅವುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುಜಿಸಿ,ದೂರ ಶಿಕ್ಷಣ ಸಮಿತಿ ನಿರ್ದೇಶನಾಲಯದ ಹಿಡಿತದಿಂದ ಅದನ್ನು ತನ್ನ ವಶಕ್ಕೆ ಪಡೆಯಿತು.

ದೂರ ಶಿಕ್ಷಣಕ್ಕೆ ಇದ್ದ 1985ರ ಕಾಯ್ದೆಯನ್ನು ರದ್ದುಪಡಿಸಿ, 2017ರಲ್ಲಿ ಹೊಸದೊಂದು ಕಾಯ್ದೆಯನ್ನು ಯುಜಿಸಿ ಜಾರಿಗೆ ತಂದಿತು. ಅದರ ಅನ್ವಯ ನ್ಯಾಕ್ ನೀಡುವ ಶ್ರೇಯಾಂಕದಲ್ಲಿ ‘ಎ’ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮಾತ್ರ ದೂರ ಶಿಕ್ಷಣ ನೀಡುವುದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.

ಆದರೆ, 2018ರಲ್ಲಿ ಮತ್ತೊಂದು ತಿದ್ದುಪಡಿ ತಂದ ಯುಜಿಸಿ, 3.26 ಕ್ಕೂ ಅಧಿಕ ಸಿ.ಜಿ.ಪಿ.ಎ (ಕ್ಯುಮಿಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್‌) ಹೊಂದಿದ ವಿಶ್ವವಿದ್ಯಾಲಯಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು. ಕರ್ನಾಟಕ ವಿಶ್ವವಿದ್ಯಾಲಯದ ಸಿ.ಜಿ.ಪಿ.ಎ 3.15 ಇದ್ದ ಕಾರಣ ಅರ್ಜಿ ಸಲ್ಲಿಸುವ ಅವಕಾಶವನ್ನೇ ಅದು ಕಳೆದುಕೊಂಡಿತು.

ಆದರೆ, 3.09 ಸಿಜಿಪಿಎ ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯ ಮತ್ತು 3.05 ಸಿಜಿಪಿಎ ಹೊಂದಿರುವ ಕುವೆಂಪು ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ದೊರಕಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಅವಕಾಶ ವಂಚಿತ ವಿಶ್ವವಿದ್ಯಾಲಯಗಳು ಯುಜಿಸಿಗೆ ಪತ್ರ ಬರೆದು ತಮಗೂ ದೂರ ಶಿಕ್ಷಣ ಕೊಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದವು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸದ್ಯ 11 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೂರ ಶಿಕ್ಷಣದ ಮೂಲಕ ಕಲಿಯುತ್ತಿದ್ದಾರೆ.2001ರಲ್ಲಿ 5 ಸಿ.ಜಿ.ಪಿ.ಎ ಇತ್ತು. 2008ರಲ್ಲಿ 3.2 ಹಾಗೂ ಸದ್ಯ 3.15 ಇದ್ದು, ತ್ರಿಸ್ಟಾರ್‌ ನೊಂದಿಗೆ ನ್ಯಾಕ್ ನೀಡುವ ‘ಎ’ ಶ್ರೇಯಾಂಕವನ್ನು ವಿಶ್ವವಿದ್ಯಾಲಯ ಹೊಂದಿದೆ. ಎರಡು ಬಾರಿ ಅರ್ಜಿ ಅಪ್‌ಲೋಡ್ ಮಾಡಲಾಗಿದೆ. ಹೀಗಿದ್ದರೂ ಮಾನ್ಯತೆ ನೀಡದಿರುವುದರಿಂದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದಾರೆ’ ಎಂದು ವಿಶ್ವವಿದ್ಯಾಲಯ ಮಾನ್ಯತೆಗೆ ಆಗ್ರಹಿಸಿತ್ತು.

ಇದಾದ ನಂತರ ಯುಜಿಸಿ ಮತ್ತೊಂದು ಸುತ್ತೋಲೆ ಹೊರಡಿಸಿದ್ದು, 4 ಅಂಶಗಳ 3.26 ಸಿಜಿಪಿಎ ಕಡ್ಡಾಯ ಎಂಬ ನಿಲುವಿಗೆ ಅಂಟಿಕೊಂಡಿದೆ. ಆದರೆ ದೂರಶಿಕ್ಷಣ ನೀಡಲು ಅಗತ್ಯ ಇರುವ ಮಾನ್ಯತೆಯನ್ನು 2020ರ ಜೂನ್‌ ಒಳಗಾಗಿ ಪಡೆಯಬೇಕು ಎಂದು ಸೂಚಿಸಿದೆ. ಇದರಿಂದಾಗಿ ದೂರ ಶಿಕ್ಷಣ ಕಳೆದುಕೊಳ್ಳುವ ಭೀತಿಯಲ್ಲಿದ್ದ ವಿಶ್ವವಿದ್ಯಾಲಯಗಳು ನಿರಾಳವಾಗಿವೆ.

*ದೂರ ಶಿಕ್ಷಣ ಸಂಬಂಧ ಮಾನವ ಸಂಪನ್ಮೂಲ ಸಚಿವಾಲಯಕ್ಕೂ ಭೇಟಿ ನೀಡಿ ಕೋರ್ಸ್‌ನ ಅಗತ್ಯವನ್ನು ವಿವರಿಸಲಾಗಿದೆ. ಈಗ ನೀಡಿರುವ ಅವಕಾಶವನ್ನೂ ವಿಶ್ವವಿದ್ಯಾಲಯ ಬಳಸಿಕೊಳ್ಳಲಿದೆ.

– ಕಲ್ಲಪ್ಪ ಎಂ. ಹೊಸಮನಿ, ಕುಲಸಚಿವ (ಆಡಳಿತ), ಕರ್ನಾಟಕ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT