ಡಿ.ಕೆ.ಸುರೇಶ್‌ ₹338 ಕೋಟಿ ಒಡೆಯ! ಐದು ವರ್ಷಗಳಲ್ಲಿ ₹252 ಕೋಟಿ ಹೆಚ್ಚಳ

ಶುಕ್ರವಾರ, ಏಪ್ರಿಲ್ 26, 2019
28 °C

ಡಿ.ಕೆ.ಸುರೇಶ್‌ ₹338 ಕೋಟಿ ಒಡೆಯ! ಐದು ವರ್ಷಗಳಲ್ಲಿ ₹252 ಕೋಟಿ ಹೆಚ್ಚಳ

Published:
Updated:

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ಬರೋಬ್ಬರಿ ₹ 338.65 ಕೋಟಿ ಮೊತ್ತದ ಆಸ್ತಿಯ ಒಡೆಯರಾಗಿದ್ದಾರೆ. 

ಚುನಾವಣಾ ಅಧಿಕಾರಿಗಳಿಗೆ ಮಂಗಳವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅವರು ತಮ್ಮ ಕುಟುಂಬದ ಆಸ್ತಿಯ ವಿವರಗಳನ್ನು ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯು ₹ 252 ಕೋಟಿಗಳಷ್ಟು ಹೆಚ್ಚಾಗಿದ್ದು, ಒಟ್ಟಾರೆ ಮೌಲ್ಯವು ನಾಲ್ಕು ಪಟ್ಟು ವೃದ್ಧಿಸಿದೆ. 2014ರಲ್ಲಿ ಅವರು ₹ 85.87 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು.

₹ 107.18 ಕೋಟಿ ಮೊತ್ತದ ಆಸ್ತಿಯು ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದರೆ, ₹ 198.4 ಕೋಟಿ ಮೊತ್ತದ ಆಸ್ತಿಯನ್ನು ಸ್ವಂತ ಶ್ರಮದಿಂದ ಗಳಿಸಿದ್ದಾರೆ. ಗಣಿಗಾರಿಕೆ, ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಐದು ಪ್ರಕರಣಗಳು ದಾಖಲಾಗಿವೆ.

ಚರಾಸ್ತಿ

ಸಂಸದರ ಬಳಿ ಸದ್ಯ ₹ 22.35 ಲಕ್ಷ ನಗದು ಇದೆ. ಬ್ಯಾಂಕುಗಳಲ್ಲಿ ₹ 3.23 ಕೋಟಿ ಠೇವಣಿ ಇಟ್ಟಿದ್ದಾರೆ. ₹ 26.20 ಕೋಟಿಯಷ್ಟು ಸಾಲ ಕೊಟ್ಟಿದ್ದಾರೆ. ಅವರ ಬಳಿ ₹ 23.45 ಲಕ್ಷ ಮೌಲ್ಯದ 1260 ಗ್ರಾಂ ಚಿನ್ನ ಹಾಗೂ 4860 ಗ್ರಾಂ ಬೆಳ್ಳಿ ಇದೆ. ಮಗ ಕೇಶಿನ್‌ ಬಳಿ 250 ಗ್ರಾಂ ಚಿನ್ನ ಹಾಗೂ 2 ಕೆ.ಜಿ. ಬೆಳ್ಳಿ ಇದೆ. ಓಡಾಡಲು 15 ಲಕ್ಷ ಮೌಲ್ಯದ ಕೆಟ್ರಾ ಕಾರು ಇಟ್ಟುಕೊಂಡಿದ್ದಾರೆ. ಕಳೆದ ಐದು ವರ್ಷದಲ್ಲಿ ಅವರ ಕುಟುಂಬವು ಹೆಚ್ಚುವರಿ ಆಭರಣ ಕೊಂಡಿಲ್ಲ.

ಸ್ಥಿರಾಸ್ತಿ

ಸುರೇಶ್‌ ಬಳಿ ಕೃಷಿಗಿಂತ ಕೃಷಿಯೇತರ ಭೂಮಿಯೇ ಹೆಚ್ಚಿದೆ. ವಿವಿಧೆಡೆ ಅವರು ₹ 4.19 ಕೋಟಿ ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಆದರೆ ಅವರು ಹೊಂದಿರುವ ಕೃಷಿಯೇತರ ಜಮೀನಿನ ಮೌಲ್ಯ ₹ 248.23 ಕೋಟಿಯಷ್ಟಿದೆ. ಇದಲ್ಲದೆ ₹ 35.23 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಹಾಗೂ ₹ 16.05 ಕೋಟಿ ಮೌಲ್ಯದ ವಸತಿ ಕಟ್ಟಡಗಳನ್ನು ಅವರು ಹೊಂದಿದ್ದಾರೆ.

ಸಾಲದ ಲೆಕ್ಕಾಚಾರ

₹ 51.93 ಕೋಟಿ ಸಾಲ ಇವರ ಮೇಲಿದೆ. ಅತ್ತಿಗೆ ಉಷಾ ಅವರಿಂದಲೇ ₹ 11.34 ಕೋಟಿ ಸಾಲ ಪಡೆದಿದ್ದಾರೆ. ಇತರರಿಗೆ ₹ 26.2 ಕೋಟಿ ಸಾಲ ನೀಡಿದ್ದಾರೆ. ತಾಯಿ ಗೌರಮ್ಮಗೆ ₹ 4.86 ಕೋಟಿ, ಅಣ್ಣ ಡಿ.ಕೆ.ಶಿವಕುಮಾರ್‌ಗೆ ₹ 1.03 ಕೋಟಿ ಹಾಗೂ ಅವರ ಪುತ್ರಿ ಐಶ್ವರ್ಯಗೆ ₹ 6.87 ಕೋಟಿ ಕೊಟ್ಟಿದ್ದಾರೆ.

ಆದಾಯ ಎಷ್ಟು?

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಅವರ ವಾರ್ಷಿಕ ಆದಾಯ ₹ 1.87 ಕೋಟಿಯಷ್ಟು ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. 2014ರಲ್ಲಿ ಅವರ ವರ್ಷದ ಆದಾಯ ₹ 5.33 ಲಕ್ಷ ದಷ್ಟಿತ್ತು.

ಆಸ್ತಿ ಸ್ವರೂಪ    ವರ್ಷ 2019          2014
ನಗದು            ₹ 22.35 ಲಕ್ಷ       ₹ 11.86 ಲಕ್ಷ
ಚರಾಸ್ತಿ           ₹ 33.06 ಕೋಟಿ    ₹ 15.77 ಕೋಟಿ
ಸ್ಥಿರಾಸ್ತಿ           ₹ 305.06 ಕೋಟಿ  ₹ 69.96 ಕೋಟಿ
ಸಾಲ             ₹ 51.93 ಕೋಟಿ    ₹ 18.48 ಕೋಟಿ
 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 3

  Frustrated
 • 18

  Angry

Comments:

0 comments

Write the first review for this !