ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡ್ಡು: ಪಾದಯಾತ್ರೆ ಶುರು

ಜಿಂದಾಲ್‌ಗೆ ಭೂಮಿ ಮಾರದಿರಲು ಆಗ್ರಹ
Last Updated 8 ಆಗಸ್ಟ್ 2019, 13:37 IST
ಅಕ್ಷರ ಗಾತ್ರ

ತೋರಣಗಲ್ಲು: ‘ಜಿಂದಾಲ್‌ಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಬಾರದು’ ಎಂದು ಆಗ್ರಹಿಸಿ ಜನಸಂಗ್ರಾಮ ಪರಿಷತ್‌ ನೇತೃತ್ವದಲ್ಲಿ ಸಮೀಪದವಡ್ಡು ಗ್ರಾಮದಿಂದ ಬಳ್ಳಾರಿಗೆ ಗುರುವಾರ ಪಾದಯಾತ್ರೆ ಆರಂಭವಾಯಿತು.

ಗ್ರಾಮದ ಹಳ್ಳದರಾಯ ದೇವಸ್ಥಾನದ ಮುಂಭಾಗಪರಿಷತ್ ಮುಖಂಡ ಎಸ್.ಆರ್.ಹಿರೇಮಠಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‌ ಚಳವಳಿಯ ಐತಿಹಾಸಿಕ ದಿನ ಆ. 9ರಂದೇ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಮುಕ್ತಾಯವಾಗಲಿದೆ. ಜಿಂದಾಲ್‌ ಬಳ್ಳಾರಿ ಬಿಟ್ಟು ತೊಲಗಬೇಕು ಎಂಬುದೇ ನಮ್ಮ ಆಗ್ರಹ. ಭೂಮಿ ಮಾರಾಟ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಕುರೆಕುಪ್ಪ, ಮುಸಿನಾಯಕನಹಳ್ಳಿ, ತೋರಣಗಲ್ಲು, ಸುಲ್ತಾನಪುರ ಗ್ರಾಮದ 3,667 ಎಕರೆ ಜಮೀನನ್ನು ಮಾರಾಟ ಮಾಡದೆ, ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕು. ಜಿಂದಾಲ್‌ಗೆ ಇದುವರೆಗೆ ನೀಡಿರುವ ಭೂಮಿಯ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರ ಸ್ವತಂತ್ರ ಸಮಿತಿಯಿಂದ ತನಿಖೆಗೆ‌ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ಜಿಂದಾಲ್‌ಗೆ ಭೂಮಿ ನೀಡಿದವರಿಗೆ ಉದ್ಯೋಗ ದೊರಕಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು. ಜೀವ ಸಂಕುಲಕ್ಕೆ ಮಾರಕವಾದ ಎಪ್ಸಿಲಾನ್ ಡಾಂಬರು ಮತ್ತು‌ ಪೇಂಟ್ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು. ಕುಮಾರಸ್ವಾಮಿ, ಪಾರ್ವತಿ‌ ದೇಗುಲದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ತುಂಗಭದ್ರಾ ಮತ್ತು ಅಲಮಟ್ಟಿ ಜಲಾಶಯದ ನೀರನ್ನು ಜಿಂದಾಲ್ ಅಕ್ರಮವಾಗಿ ಬಳಸದಂತೆ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ಇಂದು ಬಳ್ಳಾರಿಗೆ: 9ರಂದು ಪಾದಯಾತ್ರಿಗಳು ಬಳ್ಳಾರಿಗೆ ಬರಲಿದ್ದು, ಸಂಕಲ್ಪಸಭೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯಪತ್ರ ಸಲ್ಲಿಸಲು ಮುಖಂಡರು ನಿರ್ಧರಿಸಿದ್ದಾರೆ.

ರೈತಸಂಘ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘ, ರೈತ ಕೃಷಿ ಕಾರ್ಮಿಕರ ಸಂಘ, ಚಾಗನೂರು–ಸಿರಿವಾರ ನೀರಾವರಿ ಭೂ ಹೋರಾಟ ಸಮಿತಿ ಹಾಗೂ ಇಸಿಪಿಎಲ್ ಕಾರ್ಖಾನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟದ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲ್ದಳ್ಳಿ, ಸೋಮಶೇಖರ ಗೌಡ ಮತ್ತು ಮಾಧವರೆಡ್ಡಿ, ನಾಗರತ್ನಾ, ಬಿ.ನಾರಾಯಣಸ್ವಾಮಿ, ಎ.ದೇವದಾಸ್‌, ಗೋವಿಂದ, ಮಂಜುಳಾ, ಆರ್‌.ಸೋಮಶೇಖರ್‌. ಈ.ಹನುಮಂತಪ್ಪ, ಶಿವಾನಂದಯ್ಯ, ಮಹಾರುದ್ರಗೌಡ, ಟಿ.ಎ.ಶಿವಕುಮಾರ್‌, ರುದ್ರಗೌಡ ಮತ್ತು ಚಂದ್ರಪ್ಪ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT