ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ, ಜಾನಪದ ತಜ್ಞ ಡಾ. ಜಿ.ವಿ. ದಾಸೇಗೌಡ ನಿಧನ

ಕಳಚಿದ ಜಾನಪದ ಸೊಗಡಿನ ಕೊಂಡಿ
Last Updated 21 ಏಪ್ರಿಲ್ 2019, 12:03 IST
ಅಕ್ಷರ ಗಾತ್ರ

ಮಂಡ್ಯ: ಜಿ.ವಿ.ಡಿ. ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ.ವಿ. ದಾಸೇಗೌಡ (65) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆ 'ಪ್ರಜಾವಾಣಿ' ದಿನಪತ್ರಿಕೆ ಸುದ್ದಿ ಸಂಪಾದಕ ಜಿ.ಡಿ.ಯತೀಶ್ ಕುಮಾರ್ ಸೇರಿ ಇಬ್ಬರು ಪತ್ರರು, ಪುತ್ರಿ ಇದ್ದಾರೆ. ಮಂಡ್ಯ ನಗರದ ಗುತ್ತಲುವಿನಲ್ಲಿ ಸಂಜೆ ಮೃತರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ.

ಜಾನಪದ ಕ್ಷೇತ್ರದಲ್ಲಿ ಹೆಗ್ಗುರುತುಗಳನ್ನು ಮೂಡಿಸಿದ್ದ ಜಿ.ವಿ.ಡಿ. ನಿಧನದಿಂದ ಜಾನಪದ ಕ್ಷೇತ್ರದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.

ಜಾನಪದ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದ ಗಮನ ಸೆಳೆದಿದ್ದ ಅವರು ಕಥೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕ, ಕಾವ್ಯ ಮೀಮಾಂಸೆ, ಪ್ರಬಂಧ ಸಾಹಿತ್ಯ ಪ್ರಕಾರದಲ್ಲೂ ಛಾಪು ಮೂಡಿಸಿದ್ದರು. ಕನ್ನಡವಷ್ಟೇ ಅಲ್ಲದೇ ಇಂಗ್ಲಿಷ್, ಹಿಂದಿ, ಸಂಸ್ಕೃತ, ಪ್ರಾಕೃತ ಭಾಷೆಗಳನ್ನು ಬಲ್ಲ ಅವರು, ಕನ್ನಡ ಪ್ರಾದ್ಯಾಪಕರಾಗಿ ಮಂಡ್ಯದ ಕೆ.ಎಂ.ದೊಡ್ಡಿ, ಮಡಿಕೇರಿ, ತುಮಕೂರು, ಮಂಡ್ಯ, ಮತ್ತಿತರ ಸರ್ಕಾರಿ ಕಾಲೇಜುಗಳಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಅಂತರರಾಷ್ಟ್ರೀಯ ಜಾನಪದ ಶಿಬಿರಗಳಲ್ಲಿ ಭಾಗವಹಿಸಿದ್ದ ಅವರು, ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮತ್ತು ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಡಾ. ಜಿ.ವಿ.ಡಿ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿವೆ. ಹಲವಾರು ಸಂಘ ಸಂಸ್ಥೆಗಳು, ಜಿಲ್ಲಾಡಳಿತಗಳು, ಜಾನಪದ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿ ಸನ್ಮಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT