ಗುರುವಾರ , ನವೆಂಬರ್ 21, 2019
23 °C
ಮೊದಲ ಆರೋಪಿ ಹಾಜರುಪಡಿಸದ್ದಕ್ಕೆ ನ್ಯಾಯಾಲಯ ಅತೃಪ್ತಿ

ಎಸ್‌ಐಟಿ ಡಿ.ಜಿಗೆ ನೋಟಿಸ್: ಕೋರ್ಟ್ ಮೌಖಿಕ ಎಚ್ಚರಿಕೆ

Published:
Updated:
Prajavani

ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್‌ ಕಾಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ, ಎಸ್‌ಐಟಿ ಡಿ.ಜಿಗೆ ನೋಟಿಸ್ ಜಾರಿ ಮಾಡುವುದಾಗಿ ಗುರುವಾರ ಮೌಖಿಕ ಎಚ್ಚರಿಕೆ ನೀಡಿತು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ಎಲ್ಲಾ ಆರೋಪಿಗಳು ಹಾಜರಿರಬೇಕು. ಮೊದಲ ಆರೋಪಿ ಅಮೋಲ್‌ ಕಾಳೆಯನ್ನು ಎಸ್‌ಐಟಿಯು ಕೋರ್ಟ್‌ ಮುಂದೆ ಹಾಜರುಪಡಿಸದೆ ತಾಳ್ಮೆ ಪರೀಕ್ಷಿಸುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ಆರೋಪಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ವಿಶೇಷ ಪ್ರಾಸಿಕ್ಯೂಟರ್ ಅವರಿಗೆ ಸೂಚಿಸಿ, ಇದೇ 24ಕ್ಕೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು. 

ಪ್ರಕರಣದ ಸಂಬಂಧ ಸದ್ಯ ನ್ಯಾಯಾಂಗ ವಶದಲ್ಲಿರುವ ಇತರೆ ಆರೋಪಿಗಳಾದ ಗಣೇಶ ಮಿಸ್ಕಿನ್‌, ಪ್ರವೀಣ ಚತುರೆ, ಅಮಿತ್‌ ಬದ್ದಿ, ವಾಸುದೇವ ಸೂರ್ಯವಂಶಿ ಮತ್ತು ಶರದ್ ಬಾಹು ಸಾಹೇಬ್‌ ಅವರನ್ನು ಹಾಜರುಪಡಿಸಲಾಗಿತ್ತು.

ಅನಾರೋಗ್ಯದ ಕಾರಣ ನೀಡಿ ಅಮೋಲ್‌ ಕಾಳೆಯನ್ನು ಹಾಜರುಪಡಿಸಲಿಲ್ಲ. ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವ ಆರೋ‍ಪ ಎದುರಿಸುತ್ತಿರುವ ಅಮೋಲ್‌ ಕಾಳೆ ಸದ್ಯ ಮೈಸೂರು ಕಾರಾಗೃಹದಲ್ಲಿದ್ದಾರೆ. 

ಈ ಮಧ್ಯೆ, ನ್ಯಾಯಾಲಯಕ್ಕೆ ಬಂದ ಆರೋಪಿಗಳು ‘ನಾವು ಅಮಾಯಕರು, ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದರು. ವಿಚಾರಣೆ ನಂತರ ಹೊರ ಬಂದ ಆರೋಪಿಗಳು, ‘ನಮಗೆ ನ್ಯಾಯ ಬೇಕು’ ಎಂದು ಹಿಂದಿಯಲ್ಲಿ  ಅಲವತ್ತುಕೊಂಡು ಪೊಲೀಸ್‌ ವಾಹನ ಏರಿದರು.

ಪ್ರತಿಕ್ರಿಯಿಸಿ (+)