ಪ್ರವಾಹ ಸ್ಥಿತಿಗತಿ: ರಾಜ್ಯಕ್ಕೆ ಕೇಂದ್ರದ ತಂಡ ಭೇಟಿ

7

ಪ್ರವಾಹ ಸ್ಥಿತಿಗತಿ: ರಾಜ್ಯಕ್ಕೆ ಕೇಂದ್ರದ ತಂಡ ಭೇಟಿ

Published:
Updated:

ನವದೆಹಲಿ: ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಕೊಡಗು ಮತ್ತಿತರ ಜಿಲ್ಲೆಗಳ ಸ್ಥಿತಿಗತಿ ಅರಿಯಲು ಕೇಂದ್ರದ ಅಧ್ಯಯನ ತಂಡ ಕಳುಹಿಸುವುದಾಗಿ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಪರಿಹಾರಕ್ಕೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಾರ್ಯ ಕೈಗೆತ್ತಿಕೊಳ್ಳಲು ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ಅನುಕೂಲವಾಗುವಂತೆ ಕೇಂದ್ರದಿಂದ ನೆರವು ಕೋರಿ ಸೋಮವಾರ ಪ್ರಧಾನಿ ಅವರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯಕ್ಕೆ ಶೀಘ್ರವೇ ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೇಟಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂಗಾರು ಕೊರತೆಯಿಂದಾಗಿ ರಾಜ್ಯದ 86 ತಾಲ್ಲೂಕುಗಳಲ್ಲಿ ತೀವ್ರ ಬರಗಾಲದ ಸ್ಥಿತಿ ಇದೆ. ಒಟ್ಟು ₹ 8,000 ಕೋಟಿ ಮೌಲ್ಯದ ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರದ ನೆರವು ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಒಟ್ಟು 74 ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಮಳೆಯ ಕೊರತೆಯಿಂದಾಗಿ 14 ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆಯಾಗಿರುವ ಪ್ರದೇಶದಲ್ಲೂ 15 ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ಒಟ್ಟು ₹ 8,000 ಕೋಟಿಯಷ್ಟು ಹಾನಿಯನ್ನು ಅಂದಾಜಿಸಲಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಪರಿಹಾರ ನಿಧಿ ಅಡಿ ಅನುದಾನ ಒದಗಿಸಲು ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಸತತ ಮೂರು ವಾರ ಮಳೆ ಬಂದಿಲ್ಲದ ಹಾಗೂ ಕನಿಷ್ಠ ಶೇ 33ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿಲ್ಲದ ಪ್ರದೇಶಗಳನ್ನು ಮಾತ್ರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು ಎಂಬ ಮಾನದಂಡ ಇದೆ. ಈ ಮಾನದಂಡದಿಂದಾಗಿ ಬರಗಾಲ ಆವರಿಸಿರುವ ಪ್ರದೇಶಗಳ ರೈತರಿಗೆ ತೀವ್ರ ಅನ್ಯಾಯ ಆಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಕೇಂದ್ರ ಸರ್ಕಾರ 2016ರಲ್ಲಿ ಪರಿಷ್ಕರಿಸಿರುವ ಮಾರ್ಗದರ್ಶಿ ಸೂತ್ರದಿಂದಾಗಿ ಸಮಸ್ಯೆ ತಲೆದೋರಿದ್ದು, ಕೂಡಲೇ ಅವುಗಳನ್ನು ಬದಲಿಸಬೇಕು ಎಂದೂ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

67 ಜನರ ಸಾವು:
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದು, 67 ಜನ ಸಾವಿಗೀಡಾಗಿದ್ದಾರೆ. ಒಟ್ಟು ₹ 3,705 ಕೋಟಿಯಷ್ಟು  ನಷ್ಟ ಉಂಟಾಗಿದ್ದು, ಕೇಂದ್ರದಿಂದ ₹ 1,199.80 ಕೋಟಿ ನೆರವಿಗೆ ಆಗ್ರಹಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಪ್ರವಾಹದಿಂದಾಗಿ ಕಾಫಿ ಬೆಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ರಸ್ತೆ, ಸೇತುವೆಗಳು ಕೊಚ್ಚಿಹೋಗಿದ್ದು, ಮನೆಗಳು, ಸರ್ಕಾರಿ ಕಟ್ಟಡಗಳು ನೆಲಕಚ್ಚಿವೆ. ಕೇರಳದಂತೆಯೇ ರಾಜ್ಯದ ಕೊಡಗು ಜಿಲ್ಲೆಯಲ್ಲೂ ಹಾನಿ ಉಂಟಾಗಿದೆ ಎಂದು ಪ್ರಧಾನಿಗೆ ಮನವರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮೇಕೆದಾಟು ಯೋಜನೆಗಾಗಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕಿರುವ ಅಗತ್ಯದ ಕುರಿತೂ ಪ್ರಧಾನಿಯವರಿಗೆ ವಿವರ ನೀಡಲಾಯಿತು. ತಮಿಳುನಾಡು ಮತ್ತು ಕರ್ನಾಟಕದ ಜನಪ್ರತಿನಿಧಿಗಳ ಸಭೆ ಕರೆಸಿ ಈ ಬಗ್ಗೆ ಚರ್ಚಿಸಿ ಅನುಕೂಲ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎದು ಅವರು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜ್ಯದ ನಿಯೋಗದಲ್ಲಿ ಹಾಜರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !