ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ ತಮಿಳುನಾಡಿಗೆ ನಕಲಿ ನೋಟುಗಳ ಸಾಗಣೆ, ಬೃಹತ್‌ ಜಾಲದ ಶಂಕೆ

Last Updated 17 ಆಗಸ್ಟ್ 2019, 8:58 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಅಟ್ಟುಗೂಳಿ‍ಪುರ ಗ್ರಾಮದ ಸುವರ್ಣಾವತಿ ಜಲಾಶಯದ ಬಳಿ ಶುಕ್ರವಾರ ಪತ್ತೆಯಾಗಿರುವ ಭಾರಿ ಪ್ರಮಾಣದ ನಕಲಿ ನೋಟುಗಳು, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ವ್ಯವಸ್ಥಿತ ನಕಲಿ ನೋಟಿನ ಜಾಲ ಕಾರ್ಯಾಚರಿಸುತ್ತಿರುವ ಅನುಮಾನ ಹುಟ್ಟುಹಾಕಿದೆ.

ಬೊಲೆರೊ ಪಿಕ್‌ಅಪ್‌ನಲ್ಲಿ ಸಾಗಣೆ ಮಾಡಲಾಗುತ್ತಿದ್ದ ₹2,000 ಮುಖಬೆಲೆಯ ನಕಲಿ ನೋಟುಗಳ ಕಂತೆಗಳಲ್ಲಿ ₹3.16 ಕೋಟಿ ಮೌಲ್ಯದ ನೋಟುಗಳಿದ್ದವು. ‌ಇವುಗಳನ್ನು ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪೊಲೀಸರು ಬಂಧಿಸಿರುವ ವ್ಯಕ್ತಿ ವಾಹನದ ಚಾಲಕನಾಗಿದ್ದು, ಮೈಸೂರು ಜಿಲ್ಲೆಯ ಸರಗೂರು ಪಟ್ಟಣದ ನಿವಾಸಿ ಕಾರ್ತಿಕ್‌ (23) ಎಂದು ಗುರುತಿಸಲಾಗಿದೆ. ಅದೇ ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರುವ ನೋಟುಗಳೆಲ್ಲ ಕಲರ್‌ ಜೆರಾಕ್ಸ್‌ ಆಗಿದ್ದವು. ಎಲ್ಲ ನೋಟುಗಳಲ್ಲಿ ಒಂದೇ ಸಂಖ್ಯೆ ಇದೆ. ಉತ್ತಮ ಗುಣಮಟ್ಟದ ಕಾಗದ ಬಳಸಿ ಜೆರಾಕ್ಸ್‌ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

‘ನಕಲಿ ನೋಟುಗಳನ್ನು ಜಿಲ್ಲೆಯ ಮೂಲಕ ಸಾಗಿಸಲಾಗುತ್ತಿದೆ ಎಂಬ ಮಾಹಿತಿ 15 ದಿನಗಳ ಹಿಂದೆ ಸಿಕ್ಕಿತ್ತು. ಇದನ್ನು ಪತ್ತೆ ಹಚ್ಚುವುದಕ್ಕಾಗಿ ವಿಶೇಷ ತಂಡ ರಚಿಸಿದ್ದೆವು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದೆವು. ಶುಕ್ರವಾರ ಅಟ್ಟುಗೂಳಿಪುರ ಗ್ರಾಮದಲ್ಲಿ ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿದ್ದ ಬೊಲೆರೊ ಪಿಕ್‌ ಅಪ್‌ ಅನ್ನು ತಡೆದು ತಪಾಸಣೆ ನಡೆಸಿದಾಗ ನಕಲಿ ನೋಟುಗಳ ಕಂತೆಗಳು ಪತ್ತೆಯಾದವು’ ಎಂದು ಅವರು ಹೇಳಿದರು.

‘ವಾಹನ ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುತ್ತಿತ್ತು. ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದರು. ಚಾಲಕನನ್ನು ಬಂಧಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಕಾಡಿನ ಮಧ್ಯೆ ಪರಾರಿಯಾಗಿದ್ದಾನೆ. ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಹೇಳಿದರು.

ವ್ಯವಸ್ಥಿತವಾಗಿ ಸಾಗಣೆ: ‘ನಕಲಿ ನೋಟುಗಳನ್ನು ಸಾಗಣೆ ಮಾಡುತ್ತಿದ್ದ ರೀತಿಯನ್ನು ಗಮನಿಸಿದರೆ ಅತ್ಯಂತ ವ್ಯವಸ್ಥಿತವಾಗಿ ಅಕ್ರಮ ಮಾಡಲಾಗುತ್ತಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಡೀ ವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ‘ಚಾಲಕನಾಗಿ ಬರುವುದಕ್ಕೆ ಹೇಳಿದರು. ಅದಕ್ಕೆ ಬಂದೆ’ ಎಂದು ಹೇಳುತ್ತಿದ್ದಾನೆ. ನಕಲಿ ನೋಟುಗಳನ್ನು ಇಡಲಾಗಿದೆ ಎಂಬ ಸಂಗತಿಯೂ ತನಗೆ ಗೊತ್ತಿರಲಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ‌. ವಾಹನದಲ್ಲಿದ್ದ ಇನ್ನೊಬ್ಬನಿಗೆ ಎಲ್ಲ ಮಾಹಿತಿ ಇದ್ದ ಹಾಗೆ ಕಾಣುತ್ತದೆ. ಹಾಗಾಗಿ ತಲೆ ಮರೆಸಿಕೊಂಡಿದ್ದಾನೆ’ ಎಂದು ಅವರು ವಿವಿರಿಸಿದರು.

ಮಾಹಿತಿ ಇಲ್ಲ: ‘ಈ ನೋಟುಗಳನ್ನು ಎಲ್ಲಿ ಮುದ್ರಿಸಲಾಗುತ್ತಿತ್ತು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ಇನ್ನೂ ಗೊತ್ತಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ. ವಿಚಾರಣೆ ನಡೆಸುತ್ತಿದ್ದೇವೆ. ಎಲ್ಲ ವಿವರಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌, ಡಿವೈಎಸ್‌ಪಿ ಜೆ.ಮೋಹನ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ, ಕಾರ್ಯಾಚರಣೆ ನಡೆಸಿ ನೋಟುಗಳನ್ನು ವಶಪಡಿಸಿಕೊಂಡ ರಾಮಸಮುದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಇದ್ದರು.

ವಾಹನಕ್ಕೆ ವಿಶೇಷ ವಿನ್ಯಾಸ
ಯಾರಿಗೂ ಗೊತ್ತಾಗದಂತೆ ನಕಲಿ ನೋಟುಗಳನ್ನು ಸಾಗಣೆ ಮಾಡಲು ಬೊಲೆರೊ ಪಿಕ್‌ಅಪ್‌ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿತ್ತು. ವಾಹನದ ಹಿಂಭಾಗದಲ್ಲಿ ಮತ್ತೊಂದು ಪ್ಲಾಟ್‌ಫಾರ್ಮ್‌ (ಪೆಟ್ಟಿಗೆಯಂತಹ ರಚನೆ) ನಿರ್ಮಿಸಲಾಗಿತ್ತು. ನಕಲಿ ನೋಟುಗಳನ್ನು ಅದರಲ್ಲಿ ಇಡಲಾಗಿತ್ತು.

ವಾಹನಕ್ಕೆ ಎರಡು ನಂಬರ್‌ ಪ್ಲೇಟ್‌ಗಳಿದ್ದು, ಪೊಲೀಸರ ಕಣ್ಣು ತಪ್ಪಿಸಲು ಪದೇ ಪದೇ ಅವುಗಳನ್ನು ಬದಲಾಯಿಸಲಾಗುತ್ತಿತ್ತು ಎಂದು ಎಸ್‌ಪಿ ಆನಂದ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT