ಅಧೀನ ನ್ಯಾಯಾಲಯದ ಮರು ವಿಚಾರಣೆಗೆ ‘ಸುಪ್ರೀಂ’ ಆದೇಶ

7
ಡಿವಿಎಸ್‌ ಪುತ್ರ ಕಾರ್ತಿಕ್‌ ಗೌಡ ವಿರುದ್ಧದ ಪ್ರಕರಣ

ಅಧೀನ ನ್ಯಾಯಾಲಯದ ಮರು ವಿಚಾರಣೆಗೆ ‘ಸುಪ್ರೀಂ’ ಆದೇಶ

Published:
Updated:

ನವದೆಹಲಿ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್‌ ಗೌಡ ವಿರುದ್ಧ ನಟಿ ಮೈತ್ರೇಯಿ ಗೌಡ ಸಲ್ಲಿಸಿದ್ದ ವಂಚನೆ ಮತ್ತು ಲೈಂಗಿಕ ದೌರ್ಜನ್ಯದ ದೂರಿನ ಕುರಿತು ಮರು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಅಧೀನ ನ್ಯಾಯಾಲಯಕ್ಕೆ ಸೂಚಿಸಿದೆ.

‘ಮದುವೆಯಾಗುವುದಾಗಿ ನಂಬಿಸಿದ್ದ ಕಾರ್ತಿಕ್‌ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ವಂಚಿಸಿದ್ದಾರೆ’ ಎಂದು ಮೈತ್ರೇಯಿ ಸಲ್ಲಿಸಿದ್ದ ದೂರು ದಾಖಲಿಸಿಕೊಂಡಿದ್ದ ಪೊಲಿಸರು, ಲೈಂಗಿಕ ಕ್ರಿಯೆ ನಡೆಸಿರುವ ಬಗ್ಗೆ ಸಾಕ್ಷಾಧಾರಗಳಿಲ್ಲ. ಆದರೆ, ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆಯನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್, ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಆರೋಪ ಕೈಬಿಟ್ಟು ವಂಚನೆ ಪ್ರಕರಣದ ವಿಚಾರಣೆಗೆ ಸೂಚಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಮೈತ್ರೇಯಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹಾಗೂ ಇಂದ್ರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ಪೀಠವು, ಹೈಕೋರ್ಟ್‌ ಆದೇಶ ರದ್ದುಗೊಳಿಸಿದೆ.

ಅಧೀನ ನ್ಯಾಯಾಲಯವು ಎಲ್ಲ ರೀತಿಯ ಆರೋಪಗಳ ಕುರಿತು ವಿಚಾರಣೆ ನಡೆಸಬೇಕು ಎಂದು ಬೆಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿ ಪೀಠವು ಆದೇಶ ನೀಡಿದೆ.

ವಂಚನೆ ಪ್ರಕರಣದ ವಿಚಾರಣೆಗೆ ಒಪ್ಪಿಗೆ ನೀಡಿದ್ದ ಹೈಕೋರ್ಟ್‌ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೈಬಿಟ್ಟಿರುವುದು ಸರಿಯಲ್ಲ. ದೋಷಾರೋಪ ಪಟ್ಟಿ ಸಲ್ಲಿಸುವ ಮೊದಲೇ ಹೈಕೋರ್ಟ್‌ ಲೈಂಗಿಕ ದೌರ್ಜನ್ಯ ಕುರಿತ ಆರೋಪವನ್ನು ಕೈಬಿಟ್ಟಿತ್ತು ಎಂದು ಮೈತ್ರೇಯಿ ಪರ ವಕೀಲರಾದ ಆಕರ್ಷ್‌ ಕಾನಡೆ ಹಾಗೂ ಗುರುನಾಥ ಅವರು ಪೀಠಕ್ಕೆ ತಿಳಿಸಿದರು.

ಪ್ರಕರಣದ ಮರು ತನಿಖೆಯ ಅಗತ್ಯವಿದೆ. ದೂರುದಾರಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದರ ಕುರಿತು ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರೇಯಿ ಅವರು 2014ರಲ್ಲಿ ಬೆಂಗಳೂರಿನ ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಮೈತ್ರೇಯಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಕಾರ್ತಿಕ್‌ ಗೌಡ ಬೇರೊಬ್ಬ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಕಾರ್ತಿಕ್‌ ಗೌಡ ವಿವಾಹವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !