ಜೋರು ಶಬ್ದ: ಭೂಮಿ ನಡುಗಿದ ಅನುಭವ

7
‘ಭೂ ಪದರಗಳ ಹೊಂದಾಣಿಕೆ’ ಎಂದ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ

ಜೋರು ಶಬ್ದ: ಭೂಮಿ ನಡುಗಿದ ಅನುಭವ

Published:
Updated:

ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಗುರುವಾರ ಜೋರಾದ ಶಬ್ದ ಕೇಳಿಬಂದಿದ್ದು, ಅದಾದ ಕೆಲವೇ ಕ್ಷಣದಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಹಲವು ನಿವಾಸಿಗಳು, ‘ಮನೆಯ ಬಾಗಿಲು ಹಾಗೂ ಕಿಟಕಿಗಳು ಅಲುಗಾಡಿದವು’ ಎಂದು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.

ರಾಜರಾಜೇಶ್ವರಿನಗರ, ಕತ್ರಿಗುಪ್ಪೆ, ಕೋಣನಕುಂಟೆ, ನಂದಿನಿ ಲೇಔಟ್‌, ಕೆಂಗೇರಿ, ಜ್ಞಾನಭಾರತಿ, ಕುಮಾರಸ್ವಾಮಿ ಲೇಔಟ್‌, ವಸಂತಪುರ, ಕುರುಬರಹಳ್ಳಿ, ಉತ್ತರಹಳ್ಳಿ, ಹನುಮಂತನಗರ, ಗಿರಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಧ್ಯಾಹ್ನ 3.05 ಗಂಟೆ ಸುಮಾರಿಗೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಆ ಭಾಗಗಳ ನಿವಾಸಿಗಳು ತಿಳಿಸಿದರು.

‘ಸ್ನೇಹಿತರ ಜತೆ ಚಹಾ ಕುಡಿಯುತ್ತ ಹೋಟೆಲ್‌ನಲ್ಲಿ ಕುಳಿತುಕೊಂಡಿದ್ದೆ. ಏಕಾಏಕಿ ಶಬ್ದ ಕೇಳಿಬಂತು, ಬಾಗಿಲುಗಳು ಅಲುಗಾಡಿದವು. ಆಗ ಎಲ್ಲರೂ ಹೊರಗೆ ಓಡಿ ಬಂದೆವು’ ಎಂದು ರಾಜರಾಜೇಶ್ವರಿ ನಗರದ ನಿವಾಸಿ ವೆಂಕಟೇಶ್‌ ತಿಳಿಸಿದರು.

ಹನುಮಂತನಗರದ ನಿವಾಸಿ ನಾಗಭೂಷಣ, ‘ಮನೆಯ ಬಾಗಿಲು ಹಾಕಿಕೊಂಡು ಒಳಗೆ ಕುಳಿತಿದ್ದೆವು. ಮಧ್ಯಾಹ್ನ 3.05 ಗಂಟೆಗೆ  ಏಕಾಏಕಿ ಬಾಗಿಲು ಹಾಗೂ ಕಿಟಕಿ ಅಲುಗಾಡಿದವು. ಯಾರಾದರೂ ಬಡಿದಿರಬಹುದೆಂದು ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ. ಅವಾಗಲೇ ಇದು ಭೂಕಂಪ ಇರಬಹುದು ಎಂದೆನಿಸಿತು’ ಎಂದರು.

ಹೊಸಕೆರೆಹಳ್ಳಿಯ ನಿವಾಸಿ ಕುಮಾರ್‌, ‘ಸಿಡಿಲು ಬಡಿದಾಗ ಆಗುವಂಥ ಶಬ್ದವಾಯಿತು. ಗಾಜುಗಳು ಅಲುಗಾಡಿದವು. ನಂತರ, ಅಕ್ಕ–ಪಕ್ಕದವರು ಹಾಗೂ ಸಂಬಂಧಿಕರೆಲ್ಲ ಕರೆ ಮಾಡಿ ವಿಚಾರಿಸಲಾರಂಭಿಸಿದರು. ಅವರಿಗೂ ಅದೇ ರೀತಿ ಅನುಭವವಾಗಿರುವುದಾಗಿ ಹೇಳಿಕೊಂಡರು’ ಎಂದರು.

ಭೂ ಪದರಗಳ ಹೊಂದಾಣಿಕೆ: ಭೂಮಿ ನಡುಗಿದ ಬಗ್ಗೆ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ, ‘ತಿಪ್ಪಗೊಂಡನಹಳ್ಳಿ ಹಾಗೂ ಮೈಸೂರು ಬಳಿ ಭೂಕಂಪ ಮಾಪನ ಕೇಂದ್ರಗಳಿವೆ. ಅಲ್ಲಿಯ ರಿಕ್ಟರ್ ಮಾಪಕದಲ್ಲಿ  ಯಾವುದೇ ಮಾಹಿತಿ ದಾಖಲಾಗಿಲ್ಲ’ ಎಂದರು.

‘ಕಡಿಮೆ ತೀವ್ರತೆ ಇದ್ದರೆ ನಮ್ಮ ರಿಕ್ಟರ್ ಮಾಪಕದಲ್ಲಿ ಮಾಹಿತಿ ದಾಖಲಾಗುವುದಿಲ್ಲ. ಆಕಸ್ಮಾತ್ ಭೂಕಂಪ ಆಗಿದ್ದರೆ, ಅದರ ಪ್ರಮಾಣವೆಷ್ಟು ಎಂಬುದನ್ನು ಪರ್ಯಾಯ ವ್ಯವಸ್ಥೆ ಮೂಲಕ ತಿಳಿದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.

‘ಭೂಮಿಯ ಅಂತರಾಳದಲ್ಲಿ ಎರಡು– ಮೂರು ವರ್ಷಗಳಿಗೊಮ್ಮೆ ಭೂ ಪದರಗಳ ಹೊಂದಾಣಿಕೆ (ಕ್ರಸ್ಟಲ್ ರೀ ಅಡ್ಜಸ್ಟ್‌ಮೆಂಟ್) ಆಗುತ್ತಿರುತ್ತದೆ. ಗುರುವಾರ ಮಧ್ಯಾಹ್ನವೂ ಅದೇ ಆಗಿರಬಹುದು. ಅದುವೇ ಜೋರಾದ ಶಬ್ದಕ್ಕೂ ಕಾರಣವಿರಬಹುದು. ಅದು ಸಾಮಾನ್ಯ ಪ್ರಕ್ರಿಯೆ. ಜನರು ಭಯಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !