ಶನಿವಾರ, ಫೆಬ್ರವರಿ 27, 2021
29 °C
‌ಎಫ್‌ಐಆರ್‌ ದಾಖಲಿಸಲು ಜಾರಿ ನಿರ್ದೇಶನಾಲಯ ಸಿದ್ಧತೆ?

ಸಚಿವ ಡಿಕೆಶಿಗೆ ಸಂಕಷ್ಟ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಕಷ್ಟ ಎದುರಾಗುವ ಸಂಭವ ಇದೆ. ಶಿವಕುಮಾರ್‌ ವಿರುದ್ಧ  ಪ್ರಕರಣ ದಾಖಲಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಸಿದ್ಧತೆ ನಡೆಸಿದ್ದು, ಎಫ್‌ಐಆರ್‌ ದಾಖಲಾದರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.

2017ರ ಆಗಸ್ಟ್‌ನಲ್ಲಿ ಶಿವಕುಮಾರ್‌ ಅವರ ಬೆಂಗಳೂರಿನಲ್ಲಿರುವ ಮನೆ, ಕಚೇರಿ ಹಾಗೂ ದೆಹಲಿಯಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಗದು, ಡೈರಿ ಮತ್ತು ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.

ದೆಹಲಿಯಲ್ಲಿರುವ ಶಿವಕುಮಾರ್‌ ಫ್ಲ್ಯಾಟ್‌ಗಳಲ್ಲಿ ₹ 8 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿತ್ತು. ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ವರ್ಗಾಯಿಸಿತ್ತು.

ಈ ಸಂಬಂಧ ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿದ್ದ ಇ.ಡಿ, ಹಣದ ಮೂಲದ ಬಗ್ಗೆ ವಿವರಣೆ ಕೇಳಿತ್ತು. ಆದರೆ, ಶಿವಕುಮಾರ್‌ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಎಫ್‌ಐಆರ್‌ ದಾಖಲಿಸಲು ಇ.ಡಿ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ನೋಟು ರದ್ಧತಿಯ ಸಂದರ್ಭದಲ್ಲಿ ಶಿವಕುಮಾರ್‌ ₹ 10 ಲಕ್ಷಕ್ಕೂ ಹೆಚ್ಚು ಹಣವನ್ನು ಹೊಸ ನೋಟುಗಳಾಗಿ ಅಕ್ರಮವಾಗಿ ಪರಿವರ್ತಿಸಿದ ಆರೋಪವನ್ನೂ ಡಿ.ಕೆ. ಶಿವಕುಮಾರ್‌ ಮತ್ತು ಅವರ ತಮ್ಮ ಡಿ.ಕೆ. ಸುರೇಶ್‌ ಎದುರಿಸುತ್ತಿದ್ದಾರೆ.

ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ ಕಾಂಗ್ರೆಸ್‌ ಶಾಸಕರಿಗೆ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಿವಕುಮಾರ್‌ ಆಶ್ರಯ ನೀಡಿದ್ದರು. ಆ ಶಾಸಕರ ಜೊತೆ ಇದ್ದ ಸಂದರ್ಭದಲ್ಲೇ ರೆಸಾರ್ಟ್‌ಗೆ ಬಂದಿದ್ದ ಐ.ಟಿ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ಚೀಟಿಗಳನ್ನು ಶಿವಕುಮಾರ್‌ ಹರಿದುಹಾಕಿದ್ದರು. ಆ ಘಟನೆಗೆ ಸಂಬಂಧಿಸಿದಂತೆ, ಶಿವಕುಮಾರ್‌ ವಿರುದ್ಧ ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಐ.ಟಿ ಅಧಿಕಾರಿಗಳು ದೂರು ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಶಿವಕುಮಾರ್‌ ಈಗಾಗಲೇ ಜಾಮೀನು ಪಡೆದಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯ ಹೊಸತಾಗಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದರಿಂದ ಶಿವಕುಮಾರ್‌ ಅವರಿಗೆ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್‌, ‘ನನ್ನ ವಿರುದ್ಧ ಯಾಕೆ ಎಫ್ಐಆರ್ ದಾಖಲು ಮಾಡುತ್ತಾರೆ. ಕೆಲವು ಬಿಜೆಪಿ ನಾಯಕರು ಅನಗತ್ಯವಾಗಿ ಈ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು.

‘ಪ್ರಾಸಿಕ್ಯೂಷನ್ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ನ್ಯಾಯಾಲಯಕ್ಕೆ ಏನು ಗೌರವ ಕೊಡಬೇಕೊ ಕೊಡುತ್ತೇನೆ’ ಎಂದೂ ಹೇಳಿದರು.

ಇದನ್ನೂ ಓದಿ: ‘ಸರ್ಕಾರ ಅಸ್ಥಿರಕ್ಕೆ ತನಿಖಾ ಸಂಸ್ಥೆಗಳ ದುರ್ಬಳಕೆ’ ಡಿ.ಕೆ. ಸುರೇಶ್ ಆರೋಪ

‘ಬಂಧನಕ್ಕೆ ಹೆದರಲ್ಲ’
‘ಸಿಬಿಐ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಮ್ಮನ್ನು ಬಂಧಿಸಲು ಮುಂದಾದರೂ ಹೆದರುವುದಿಲ್ಲ. ಕಾನೂನು ಹೋರಾಟ ಹೇಗೆ ನಡೆಸಬೇಕು ಎನ್ನುವುದು ಗೊತ್ತಿದೆ’ ಎಂದು ಡಿ.ಕೆ. ಶಿವಕುಮಾರ್‌ ತಮ್ಮ, ಸಂಸದ ಡಿ.ಕೆ. ಸುರೇಶ್‌ ಸವಾಲು ಹಾಕಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಐ.ಟಿ ಅಧಿಕಾರಿಗಳು ನಾಲ್ಕು ಪ್ರಾಸಿಕ್ಯೂಷನ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾವು ಕಾನೂನು ಉಲ್ಲಂಘಿಸಿ ಯಾವುದೇ ವ್ಯವಹಾರ ಮಾಡಿಲ್ಲ. ಇ.ಡಿ ‌ನಮಗೆ ಯಾವುದೇ ನೋಟಿಸ್‌ ನೀಡಿಲ್ಲ. ಆದರೆ, ನೀಡಲೂ ಬಹುದು’ ಎಂದರು.

*
ನನ್ನ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಅಧಿಕಾರಿಗಳೂ ನನ್ನನ್ನು ಕರೆದು ಕೇಳಿಲ್ಲ.
-ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

*
ಡಿ.ಕೆ. ಶಿವಕುಮಾರ್‌ ಮತ್ತು ಅವರ ತಮ್ಮನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಲು ಬಿಜೆಪಿಯವರು ಯಾರು. ಇದು ರಾಜಕೀಯ ಪ್ರೇರಿತ ನಡೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

*
ಡಿ.ಕೆ. ಶಿವಕುಮಾರ್‌ ಅವರು ಸಮ್ಮಿಶ್ರ ಸರ್ಕಾರದ ಭಾಗ. ಅವರಿಗೆ ಅನ್ಯಾಯವಾದರೆ ಅದನ್ನು ನಾವೂ ವಿರೋಧಿಸುತ್ತೇವೆ.
-ಎಚ್‌. ವಿಶ್ವನಾಥ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು