ಬುಧವಾರ, ಜನವರಿ 22, 2020
19 °C
ಭದ್ರಾ ಅಭಯಾರಣ್ಯಕ್ಕೆ ಸಾಗಣೆ: ಗ್ರಾಮಸ್ಥರ ಆತಂಕ ದೂರ

ಸೆರೆ ಸಿಕ್ಕಿತು ಒಂಟಿ ಸಲಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತಾಲ್ಲೂಕಿನ ಜೋಗಿಮಟ್ಟಿ ವನ್ಯಧಾಮ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದ ಒಂಟಿಸಲಗ ನಂದಿಪುರ ಅರಣ್ಯದಲ್ಲಿ ಸೆರೆಸಿಕ್ಕಿತು.

ದಸರಾ ಆನೆ ‘ಅಭಿಮನ್ಯು’ ನೇತೃತ್ವದಲ್ಲಿ ಸೋಮವಾರ ಎಂಟು ಗಂಟೆ ನಡೆದ ಕಾರ್ಯಾಚರಣೆ ಕೊನೆಗೂ ಫಲಿಸಿತು. ಸುಮಾರು 22 ವರ್ಷದ ಸಲಗವನ್ನು ಭದ್ರಾ ಅಭಯಾರಣ್ಯಕ್ಕೆ ಸಾಗಿಸಲಾಯಿತು. ಜೋಗಿಮಟ್ಟಿ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ವಾರದಿಂದ ಮೂಡಿದ್ದ ಆತಂಕ ನಿವಾರಣೆಯಾಯಿತು.

ಭದ್ರಾ ಅಭಯಾರಣ್ಯದಿಂದ ದಾರಿ ತಪ್ಪಿ, ಆರು ದಿನಗಳ ಹಿಂದೆ ಚಿತ್ರದುರ್ಗಕ್ಕೆ ಬಂದಿದ್ದ ಸಲಗ ಅಹೋಬಲ ನರಸಿಂಹಸ್ವಾಮಿ ಬೆಟ್ಟದಲ್ಲಿತ್ತು. ರಾತ್ರಿ ಜಮೀನಿಗೆ ನುಗ್ಗಿ ಕಾಡಿಗೆ ಮರಳುತ್ತಿದ್ದ ಸಲಗವನ್ನು ಆನೆ ಕಾರಿಡಾರ್‌ಗೆ ಮರಳಿಸುವ ಪ್ರಯತ್ನ ನಡೆದಿತ್ತು. ಇದು ಅಸಾಧ್ಯ ಎಂಬುದು ಮನದಟ್ಟಾದ ಬಳಿಕ ಸೆರೆ ಹಿಡಿಯಲು ನಿರ್ಧರಿಸಲಾಗಿತ್ತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ‘ಅಭಿಮನ್ಯು’, ‘ಗೋಪಾಲಸ್ವಾಮಿ’ ಹಾಗೂ ‘ಕೃಷ್ಣ’ ಆನೆಗಳು ಸೆರೆ ಕಾರ್ಯಾಚರಣೆಗೆ ಸೋಮವಾರ ಬಂದವು. ಸಕ್ರೆಬೈಲು ಆನೆ ಶಿಬಿರದಿಂದ ಬಂದಿದ್ದ ‘ಬಾಲಣ್ಣ’ ಹಾಗೂ ‘ಸಾಗರ’ ಕೂಡ ಸಾಥ್ ನೀಡಿದವು.

ಸೆರೆ ಕಾರ್ಯಾಚರಣೆಗೆ ಬಂದ ಆನೆಗಳನ್ನು ನೋಡಿದ ಸಲಗ ಅರಣ್ಯದಲ್ಲಿ ಓಡಿತು. ಸಲಗವನ್ನು ಹಿಂಬಾಲಿಸಿದ ‘ಅಭಿಮನ್ಯು’ ಜೊತೆಗೆ ಸಲಗ ಹಲವು ಬಾರಿ ಕಾಳಗ ನಡೆಸಿತು. ಇತರ ಆನೆಗಳು ಒಗ್ಗೂಡಿ ಸಲಗವನ್ನು ಮಣಿಸಿದವು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ವೈದ್ಯ ಡಾ.ಮುಜಿಬ್‌ ಉರ್‌ ರೆಹಮಾನ್‌ ಹಾಗೂ ಶೂಟರ್‌ ವೆಂಕಟೇಶ್‌ ಆನೆಗೆ ಅರಿವಳಿಕೆ ಮದ್ದು ನೀಡಿದರು. ಪ್ರಜ್ಞೆತಪ್ಪಿದ ಸಲಗಕ್ಕೆ ಹಗ್ಗ ಬಿಗಿದು ಲಾರಿ ಸಮೀಪಕ್ಕೆ ತರಲಾಯಿತು.

‘ಭದ್ರಾ ಅಭಯಾರಣ್ಯದಿಂದ ಆನೆ ಬಂದಿರುವ ಸಾಧ್ಯತೆ ಇದೆ. ಸಲಗ ಆರೋಗ್ಯವಾಗಿದೆ’ ಎಂದು ಬಳ್ಳಾರಿ ವಲಯದ ಮುಖ್ಯ ಅರಣ್ಯ ಸಂರಕ್ಣಾಧಿಕಾರಿ ಎಸ್‌.ಎಸ್‌.ಲಿಂಗರಾಜು ಮಾಹಿತಿ ನೀಡಿದರು.

2002ರಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಆನೆಯೊಂದು ಸೆರೆಸಿಕ್ಕಿತ್ತು. ಒಂದೂವರೆ ದಶಕದ ಬಳಿಕ ಮತ್ತೆ ಜಿಲ್ಲೆಯಲ್ಲಿ ಸಲಗವನ್ನು ಸೆರೆಹಿಡಿಯಲಾಗಿದೆ. ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ‘ಬಾಲಣ್ಣ’ ಆನೆ ಒಂದೂವರೆ ವರ್ಷದ ಹಿಂದೆ ಚಿತ್ರದುರ್ಗದಲ್ಲಿ ದಾಂಧಲೆ ನಡೆಸಿತ್ತು. ಚನ್ನಗಿರಿ ಸಮೀಪ ಸೆರೆಸಿಕ್ಕ ಈ ಆನೆಯನ್ನು ಪಳಗಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು