ಬಂಡೀಪುರ ಎಲಿವೇಟೆಡ್‌ ರಸ್ತೆಗೆ ಒಪ್ಪಿಗೆ ನೀಡಿಲ್ಲ: ಎಚ್‌ಡಿಕೆ

7
ರಾತ್ರಿ ವಾಹನ ಸಂಚಾರ ನಿಷೇಧ ತೆರವು ಇಲ್ಲ

ಬಂಡೀಪುರ ಎಲಿವೇಟೆಡ್‌ ರಸ್ತೆಗೆ ಒಪ್ಪಿಗೆ ನೀಡಿಲ್ಲ: ಎಚ್‌ಡಿಕೆ

Published:
Updated:

ಬೆಂಗಳೂರು/ಮೈಸೂರು : ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ವನ್ಯಜೀವಿಗಳನ್ನು ಬಲಿ ಕೊಡುವ ಎಲಿವೇಟೆಡ್‌ ರಸ್ತೆ ಯೋಜನೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಈ ಯೋಜನೆಗೆ ರಾಜ್ಯದ ಸಮ್ಮತಿ ಕೇಳಿ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಇದನ್ನು ಪರಾಮರ್ಶಿಸಬೇಕಾಗಿದೆ. ಒಂದೊಮ್ಮೆ ಅದನ್ನು ಒಪ್ಪಿಕೊಂಡರೆ, ವನ್ಯಜೀವಿಗಳನ್ನು ಬಲಿ ಕೊಡಬೇಕಾಗುತ್ತದೆ. ಇನ್ನೂ ಒಪ್ಪಿಕೊಂಡಿಲ್ಲ’ ಎಂದು ತಿಳಿಸಿದರು.

ಮುಖ್ಯ ಎಂಜಿನಿಯರ್‌ರಿಂದ ವರದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವಿನ ಕುರಿತ ಕೇಂದ್ರ ಸರ್ಕಾರದ ಪತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಅವರಿಂದ ಲೋಕೋಪಯೋಗಿ ಇಲಾಖೆ ವರದಿ ಕೇಳಿದೆ.

‘ನಿಷೇಧ ತೆರವಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಒಪ್ಪಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಅಧಿಕೃತ ಒಪ್ಪಿಗೆ ಬೇಕಿದೆ’ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಮಂತ್ರಾಲಯದ ಕಾರ್ಯದರ್ಶಿ ವೈ.ಎಸ್. ಮಲಿಕ್‌ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಜುಲೈ 21ರಂದು ಪತ್ರ ಬರೆದಿದ್ದರು.

‘ಈ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಆಲೋಚನೆ ನಡೆಸಬೇಕಿದೆ. ಕೇಂದ್ರ ಪರಿಸರ ಮಂತ್ರಾಲಯದಿಂದ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯಬೇಕಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ‘ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಅಧ್ಯಕ್ಷತೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಪರಿಸರ ಇಲಾಖೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಅವರನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಸಮಿತಿ ಏಪ್ರಿಲ್‌ನಲ್ಲಿ ಸಭೆ ನಡೆಸಿ ಪರ್ಯಾಯ ಸಾರಿಗೆ ವ್ಯವಸ್ಥೆ ಬಗ್ಗೆ ಚರ್ಚಿಸಿದೆ ’ ಎಂದರು.

ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವುದಿಲ್ಲ. ಮೇಲ್ಸೇತುವೆ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್‌.ಶಂಕರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾತ್ರಿ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರದಿಂದ ಬಂದಿರುವ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದರು.

ಕೇರಳ ಸರ್ಕಾರದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರಲ್ಲವೇ ಎಂಬ ಪ್ರಶ್ನೆಗೆ, ಕೇರಳ ಸರ್ಕಾರ ಹಲವು ವರ್ಷಗಳಿಂದ ಒತ್ತಡ ಹಾಕುತ್ತಿದೆ. ಅವರ ಮನವಿಗೆ ಮುಖ್ಯಮಂತ್ರಿ ನೋಡೋಣ ಎಂದಷ್ಟೇ ಹೇಳಿರಬಹುದು ಎಂದು ಉತ್ತರಿಸಿದರು.

‘ಐದು ಎಲಿವೇಟೆಡ್ ಕಾರಿಡಾರ್‌’
‘ಬಂಡೀಪುರ ಅರಣ್ಯ ವ್ಯಾಪ್ತಿಯ ಕರ್ನಾಟಕದ ಭಾಗದಲ್ಲಿ 24.20 ಕಿ.ಮೀ.ಗಳಲ್ಲಿ ಹಾಗೂ ಕೇರಳ ರಾಜ್ಯದ 10.4 ಕಿ.ಮೀ.ಗಳಲ್ಲಿ ಒಂದು ಕಿ.ಮೀ. ಉದ್ದದ 5 ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ’ ಎಂದು ರೇವಣ್ಣ ತಿಳಿಸಿದರು.

‘ಎಲಿವೇಟೆಡ್ ಕಾರಿಡಾರ್‌ ನಮ್ಮ ಸರ್ಕಾರದ ಆಲೋಚನೆಯಲ್ಲ’ ಎಂದು ಸ್ಪಷ್ಟ ಪಡಿಸಿದ ಅವರು, ‘ಈ ಕಾರಿಡಾರ್‌ಗಳ ಕೆಳಗೆ ರಸ್ತೆಯನ್ನು ತೆಗೆದು ಅರಣ್ಯ ಬೆಳೆಸಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಉಳಿದ ನೆಲಮಟ್ಟದ ಭಾಗದಲ್ಲಿ ಎರಡೂ ಬದಿಗಳಲ್ಲಿ 8 ಅಡಿ ಎತ್ತರದ ಕಬ್ಬಿಣದ ಬೇಲಿಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !