ಮುಂದಿನ ವರ್ಷದಿಂದ ರಾಜ್ಯದ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಶುರು: ಸಿಎಂ

7
ಶಿಕ್ಷಕರಿಗೆ ತರಬೇತಿ ಆರಂಭ: ಕುಮಾರಸ್ವಾಮಿ

ಮುಂದಿನ ವರ್ಷದಿಂದ ರಾಜ್ಯದ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಶುರು: ಸಿಎಂ

Published:
Updated:

ಬೆಳಗಾವಿ: ರಾಜ್ಯದ 1 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2019–20ನೇ ಶೈಕ್ಷಣಿಕ ವರ್ಷದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಈ ಸಲುವಾಗಿ ಶಿಕ್ಷಕರಿಗೆ ಇಂಗ್ಲಿಷ್‌ ಪ್ರಾದೇಶಿಕ ಸಂಸ್ಥೆಯಲ್ಲಿ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಸ್ಥೆಯಲ್ಲಿ ವಿಡಿಯೊ ಕೌನ್ಸೆಲಿಂಗ್‌ ಸೌಕರ್ಯವೂ ಇದೆ. ಪಠ್ಯಪುಸ್ತಕ, ಆಡಿಯೊ– ವಿಡಿಯೊ ಕಲಿಕಾ ಕಿಟ್‌ಗಳು ಹಾಗೂ ಇ–ಕಲಿಕಾ ಸಾಧನಗಳನ್ನು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಸಿದ್ಧಪಡಿಸುತ್ತಿದೆ’ ಎಂದರು.

‘ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದಲೇ 1715 ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನೂ 1 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದರು.

1994ರಿಂದ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಆದರೂ ಕಳೆದ ಕೆಲವು ವರ್ಷಗಳಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳನ್ನು ಆರಂಭಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಕೆಲವು ಕನ್ನಡ ಹೋರಾಟಗಾರರು ಈ ಪ್ರಸ್ತಾವವನ್ನು ವಿರೋಧಿಸುತ್ತಿದ್ದಾರೆ.

ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ‘3,919 ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 10ಕ್ಕಿಂತ ಕಡಿಮೆ ಇದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಪೋಷಕರ ಮನವೊಲಿಸಲು ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದಿದ್ದಾರೆ.

ಎಚ್‌.ಹಾಲಪ್ಪ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮುಖ್ಯಮಂತ್ರಿ, ‘ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1204 ಉಪನ್ಯಾಸಕರನ್ನು ನೇಮಿಸಿಕೊಳ್ಳಲಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕ್ರಿಯೆ ಆರಂಭಿಸಿದೆ. ಜತೆಗೆ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 1,512 ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !