527 ಕೆರೆಗಳ ಹೂಳೆತ್ತಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

7
ಎತ್ತಿನಹೊಳೆ ಯೋಜನೆ: 21 ಹಳ್ಳಿಗಳ 5,000 ಎಕರೆ ಭೂಸ್ವಾಧೀನ ಅಗತ್ಯ

527 ಕೆರೆಗಳ ಹೂಳೆತ್ತಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

Published:
Updated:

ಬೆಂಗಳೂರು: ಎತ್ತಿನಹೊಳೆ ಯೋಜನೆಯಡಿ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 527 ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು, ಈ ಕೆರೆಗಳ ಹೂಳು ತೆಗೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.

ಈ ಯೋಜನೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಯೋಜನೆಗೆ ಭೂಸ್ವಾಧೀನಾಧಿಕಾರಿಗಳ ಮೂರು ಹುದ್ದೆಗಳು ಮಂಜೂರಾಗಿವೆ. ಅವುಗಳನ್ನು ಶೀಘ್ರದಲ್ಲೇ ತುಂಬಲಾಗುವುದು ಎಂದರು.

ಯೋಜನೆ ಅನುಷ್ಠಾನಕ್ಕೆ 21 ಹಳ್ಳಿಗಳ 5,000 ಎಕರೆ ಭೂಮಿ ವಶಪಡಿಸಿಕೊಳ್ಳಬೇಕಿದೆ. ಭೂಮಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಶ್ಚಿಮಘಟ್ಟಗಳಲ್ಲಿ ಹರಿದು ಸಮುದ್ರ ಸೇರುವ ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿ, ಬರಪೀಡಿತ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಎತ್ತಿನಹೂಳೆ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿರುವ ಕೆರೆಗಳ ಪುನಶ್ಚೇತನವನ್ನು, ಯೋಜನೆ ಅನುಷ್ಠಾನದ ಜೊತೆಗೇ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಈ ನೀರನ್ನು ಬಳಸಿಕೊಳ್ಳಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೆರೆಗಳ ಸಮಗ್ರ ಅಭಿವೃದ್ಧಿ: ರಾಜ್ಯದ ಕೆರೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಈ ಸೂಚನೆ ನೀಡಿದರು.

‘ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಹೂಳೆತ್ತುವ ಹೆಸರಿನಲ್ಲಿ ಅನುದಾನ ದುರುಪಯೋಗ ಆಗಬಾರದು’ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !