ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ: ಒಬ್ಬನ ಬಂಧನ

ದೂರ ಶಿಕ್ಷಣ ವಿವಿಗಳ ಹೆಸರಿನಲ್ಲಿ ಭಾರಿ ಹಣ ದೋಚಿದ್ದ ಆರೋಪಿ
Last Updated 11 ಡಿಸೆಂಬರ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಅರೋಪದ ಮೇಲೆ ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನ ಶ್ರೀ ವೆಂಕಟೇಶ್ವರ ಇಂಟರ್‌ ನ್ಯಾಷನಲ್‌ ಇನ್‍ಸ್ಟಿಟ್ಯೂಟ್ (ವಿಎಸ್‌ಎಸ್‌) ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ದಾಳಿ ನಡೆಸಿ, ಶ್ರೀನಿವಾಸರೆಡ್ಡಿ (42) ಎಂಬುವರನ್ನು ಬಂಧಿಸಿದ್ದಾರೆ. ಈತ ಅನೇಕ ವರ್ಷಗಳಿಂದ ನಕಲಿ ಅಂಕಪಟ್ಟಿ ದಂಧೆ ನಡೆಸುತ್ತಿದ್ದರು.

ಭಾರಿ ಪ್ರಮಾಣದ ನಕಲಿ ಅಂಕಪಟ್ಟಿಗಳೂ ಸೇರಿದಂತೆ ಹಲವು ದಾಖಲೆಗಳನ್ನು ವೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಅಂಕಪಟ್ಟಿಗಳನ್ನು ಸಿದ್ಧಪಡಿಸಲು ಬಳಸುತ್ತಿದ್ದ ಕಂಪ್ಯೂಟರ್‌ಗಳು ಹಾಗೂ ರಬ್ಬರ್‌ಸ್ಟ್ಯಾಂಪ್‌ಗಳನ್ನು ಜಪ್ತಿ ಮಾಡಲಾಗಿದೆ.

ಶ್ರೀನಿವಾಸರೆಡ್ಡಿ ಆಂಧ್ರಪ್ರದೇಶದ ಮೂಲದವರಾಗಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನೆಲೆಸಿದ್ದ ಆರೋಪಿ 2004ರಲ್ಲಿ ನಗರಕ್ಕೆ ಬಂದಿದ್ದು, ಇಲ್ಲಿನ ರಾಜಾಜಿನಗರದ ಬ್ರಿಗೇಡ್‌ ಗೇಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ದೂರ ಶಿಕ್ಷಣದ ಅಂಕಪಟ್ಟಿ ಕೊಡಿಸುವುದಾಗಿ ಹೇಳಿ ಖಾಸಗಿ ಕಂಪನಿಗಳ ಉದ್ಯೋಗಿಗಳನ್ನು ನಂಬಿಸಿ ₹40 ಸಾವಿರದಿಂದ ₹ 2 ಲಕ್ಷದ ವರೆಗೆ ಹಣ ಪಡೆದು ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸಂಸ್ಥೆಯಲ್ಲೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿ ಬಳಿಕ ಫಲಿತಾಂಶ ಪ್ರಕಟಿಸಿ ಅಂಕ‍ಪಟ್ಟಿಗಳನ್ನು ಆರೋಪಿ ನೀಡುತ್ತಿದ್ದರು. ಈ ಅಂಕಪಟ್ಟಿಗಳು ಅಸಲಿ ಎಂದು ನಂಬಿಸುತ್ತಿದ್ದರು. ದೆಹಲಿ ಅಕಾಡೆಮಿಕ್‌ ಕೌನ್ಸಿಲ್‌ ಹೈಯರ್‌ ಎಜುಕೇಷನ್‌ ವಿವಿ, ನೊಯ್ಡಾದ ನ್ಯಾಷನಲ್ ಯುನಿವರ್ಸಿಟಿ ಆಫ್‌ ಓಪನ್‌ ಸ್ಕೂಲಿಂಗ್‌, ಹಿಮಾಚಲದ ಮಾನವ ಭಾರತಿ, ವಿಲಾಸಪುರದ ಸಿ.ವಿ ರಾಮನ್‌, ಶಿಲ್ಲಾಂಗ್‌ನ ವಿಲಿಯನ್‌ ಕೋರಿ ಮತ್ತು ತಿರುಪತಿಯ ವೆಂಕಟೇಶ್ವರ ವಿವಿಗಳ ನಕಲಿ ಅಂಕ‍‍ಪಟ್ಟಿಗಳನ್ನು ಆರೋಪಿ ನೂರಾರು ವಿದ್ಯಾರ್ಥಿಗಳಿಗೆ ನೀಡಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ನಕಲಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳು ಸರ್ಕಾರ ಕೆಲಸ ಪಡೆಯಲು ಬಳಸದೆ ಇರುವುದರಿಂದ ಪ್ರಕರಣ ಇದುವರೆಗೆ ಬಯಲಿಗೆ ಬಂದಿರಲಿಲ್ಲ. ಆರೋಪಿಯನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿ, 10 ದಿನಗಳ ಕಾಲ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ ಎಂದು ಗೊತ್ತಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT