ಗುರುವಾರ , ಏಪ್ರಿಲ್ 15, 2021
30 °C
ಬಾದಾಮಿ ತಾಲ್ಲೂಕಿನ ಎರಡು ಸೊಸೈಟಿಗಳಿಂದ ₹ 50.18 ಲಕ್ಷ ಹೆಚ್ಚುವರಿ ಮೊತ್ತ ಪಾವತಿ

ಸಾಲ 50 ಸಾವಿರ; ಮನ್ನಾ ಲಕ್ಷ!

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪಿಕೆಪಿಎಸ್‌) ರೈತರು ₹50 ಸಾವಿರ ಸಾಲ ಪಡೆದಿದ್ದರೆ, ಸಾಲಮನ್ನಾ ಯೋಜನೆಯಡಿ ಸರ್ಕಾರ ಅವರಿಗೆ ₹1 ಲಕ್ಷ ಕೊಟ್ಟಿದೆ!

ಫಲಾನುಭವಿಗಳು ಪಡೆದ ಸಾಲದ ಮೊತ್ತಕ್ಕಿಂತ ಹೆಚ್ಚು ಹಣ ಸರ್ಕಾರದಿಂದ ಪಡೆದಿರುವ (ಕ್ಲೇಮ್) ಕಾರಣ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನ ಸಹಕಾರ ಸಂಘದ 59 ರೈತರ ಖಾತೆಗಳಿಗೆ ₹32.92 ಲಕ್ಷ ಹಾಗೂ ನೀರಲಕೇರಿ ಸಹಕಾರ ಸಂಘದ 35 ರೈತರ ಖಾತೆಗಳಿಗೆ ₹17.26 ಲಕ್ಷ ಹಣ ಹೆಚ್ಚುವರಿಯಾಗಿ ಜಮಾ ಆಗಿದೆ.

ಈ ಪ್ರಕರಣ ಬಯಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಹಕಾರ ಇಲಾಖೆ, ಜಿಲ್ಲೆಯ ಇನ್ನೂ 78 ಸಹಕಾರ ಸಂಘಗಳಲ್ಲಿನ ದಾಖಲೆಗಳ ಪರಿಶೀಲನೆಗೆ ಆದೇಶಿಸಿದೆ. ರೈತರ ಖಾತೆಗೆ ಜಮಾ ಮಾಡಿ, ನಂತರ ಅದನ್ನು ಪಡೆಯುವ ಕೆಲಸವನ್ನು ಅಧಿಕಾರಿಗಳೇ ಮಾಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಬಹಿರಂಗವಾಗಿದೆ.

ಹಣ ಗುಳುಂ ಆಗಿಲ್ಲ: ‘ಪಿಕೆಪಿಎಸ್‌ನ ತಮ್ಮ ಖಾತೆಗೆ ಹೆಚ್ಚು ಮೊತ್ತ ಜಮಾ ಆಗಿರುವ ಬಗ್ಗೆ ಕುಳಗೇರಿ ಕ್ರಾಸ್‌ನ ರೈತರೊಬ್ಬರು ಕೊಟ್ಟ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಇದು ಗೊತ್ತಾಗಿದೆ. ಸರ್ಕಾರದಿಂದ ಜಮಾ ಆಗಿರುವ ಹೆಚ್ಚುವರಿ ಮೊತ್ತ ಇನ್ನೂ ರೈತರ ಖಾತೆಯಲ್ಲಿಯೇ ಇತ್ತು. ಅದು ನಮ್ಮ ಗಮನಕ್ಕೆ ಬಾರದಿದ್ದಲ್ಲಿ ದುರುಪಯೋಗ ಆಗುವ ಸಾಧ್ಯತೆ ಇತ್ತು’ ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕಲ್ಲಪ್ಪ ಓಬಣ್ಣಗೋಳ ಹೇಳುತ್ತಾರೆ.

ಅಕ್ರಮ ಹೇಗೆ?: 2018ರ ಜುಲೈ 10ರವರೆಗೆ ಹೊಂದಿರುವ ಸಾಲದ ಬಾಕಿ ಮೊತ್ತದಲ್ಲಿ ₹1 ಲಕ್ಷದವರೆಗೆ
ಮನ್ನಾ ಮಾಡಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಕಂಪ್ಯೂಟರ್‌ನಲ್ಲಿ ನಮೂದಿಸುವಾಗ ರೈತರು ಪಡೆದ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬೇಕಂತಲೇ ದಾಖಲಿಸಲಾಗಿದೆ. ಫಲಾನುಭವಿಯೊಬ್ಬರು ₹50 ಸಾವಿರ ಸಾಲ ಪಡೆದಿದ್ದರೆ ಅವರ ಖಾತೆಗೆ ಸರ್ಕಾರದಿಂದ ₹1 ಲಕ್ಷ ಜಮಾ ಮಾಡಲಾಗಿದೆ. 

‘ನಾವು ಪಡೆದ ಸಾಲಕ್ಕಿಂತ ಹೆಚ್ಚು ಮೊತ್ತ ಫಲಾನುಭವಿಗಳ ಪಟ್ಟಿಯಲ್ಲಿ ನಮೂದು ಆಗಿರುತ್ತಿತ್ತು. ಸೊಸೈಟಿಯವರನ್ನು ಕೇಳಿದರೆ ಮುದ್ರಣದಲ್ಲಿ ಆಗಿರುವ ಲೋಪ ಎನ್ನುತ್ತಿದ್ದರು. ಇಲ್ಲವೇ ಕಣ್ತಪ್ಪಿನಿಂದ ಖಾತೆಗೆ ಹೆಚ್ಚಿನ ಮೊತ್ತ ಜಮಾ ಆಗಿದೆ. ಹೆಚ್ಚುವರಿ ಹಣ ಸರ್ಕಾರಕ್ಕೆ ಮರಳಲಿದೆ ಎಂದು ಹೇಳಿ ವೋಚರ್‌ಗೆ ಸಹಿ ಪಡೆಯುತ್ತಿದ್ದರು. ನಂತರ ಅದು ಯಾರ ಜೇಬು ಸೇರುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಕುಳಗೇರಿ ಕ್ರಾಸ್‌ನ ರೈತರೊಬ್ಬರು ಒತ್ತಾಯಿಸುತ್ತಾರೆ.

ಮೃತ ರೈತರ ಹೆಸರಿನ ಖಾತೆಗಳು ಹಾಗೂ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಮತ್ತೆ ಚಾಲನೆಗೊಳಿಸಿ, ಅವರ ಹೆಸರಿನಲ್ಲಿಯೂ ಸಾಲ ಮನ್ನಾ ಹಣ ಗುಳುಂ ಮಾಡಿರುವ ಶಂಕೆ ಇದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ಉನ್ನತ ಮಟ್ಟದ ತನಿಖೆಯಾಗಲಿ’
‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ 39 ಶಾಖೆಗಳ ವ್ಯಾಪ್ತಿಯಲ್ಲಿ 256 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಆದರೆ ಪ್ರತಿ ಶಾಖೆಗೆ 2ರಂತೆ ಕೇವಲ 78 ಸಂಘಗಳನ್ನು ಮಾತ್ರ ತಪಾಸಣೆಗೊಳಪಡಿಸಲು ಸಹಕಾರ ಇಲಾಖೆ ಮುಂದಾಗಿದೆ. ಬದಲಿಗೆ ಎಲ್ಲಾ ಸೊಸೈಟಿಗಳಲ್ಲೂ ತಪಾಸಣೆ ನಡೆಯಲಿ. ಇದರಲ್ಲಿ ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು, ಉನ್ನತ ಮಟ್ಟದ ತನಿಖೆ ಆಗಲಿ’ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆಗ್ರಹಿಸುತ್ತಾರೆ.

ನಾಲ್ವರು ಅಮಾನತು
ಕರ್ತವ್ಯಲೋಪದ ಮೇಲೆ ಕುಳಗೇರಿ ಕ್ರಾಸ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್.ದೊಡ್ಡಲಿಂಗನ್ನವರ, ಪ್ರಭಾರ ಕ್ಷೇತ್ರ ಸಿಬ್ಬಂದಿ ಪಿ.ಆರ್.ಯಾವಗಲ್ ಅವರನ್ನು ಅಮಾನತು ಮಾಡಲಾಗಿದೆ. ಈ ನಡುವೆ ಅಕ್ರಮಕ್ಕೆ ಕಾರಣರು ಎನ್ನಲಾದ ಪಿಕೆಪಿಎಸ್ ಕಾರ್ಯದರ್ಶಿಗಳಾದ ಪುಂಡಲೀಕ ಕಂಬಾರ ಹಾಗೂ ನೀಲಪ್ಪ ವಡವಣ್ಣವರ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಬಾದಾಮಿ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು