ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದಲ್ಲೇ ಉಳಿದ ಮಾವು: ಬೆಳೆಗಾರ ಕಂಗಾಲು

ಗುತ್ತಿಗೆ ಪಡೆದಿದ್ದವರೂ ಬರ್ತಿಲ್ಲ: ಎಪಿಎಂಸಿಯಲ್ಲಿ ಕನಿಷ್ಠ ಧಾರಣೆಯೂ ಸಿಗ್ತಿಲ್ಲ...
Last Updated 13 ಏಪ್ರಿಲ್ 2020, 21:22 IST
ಅಕ್ಷರ ಗಾತ್ರ

ಕಣಿಯನಹುಂಡಿ (ಮೈಸೂರು): ಫಲ ತುಂಬಿ ತೂಗುತ್ತಿರುವ ಮಾವಿನ ಮರಗಳನ್ನು ಕಂಡು ಹಿಗ್ಗುತ್ತಿದ್ದ ರೈತರ ಎದೆಯಲ್ಲಿ ಈಗ ಸದ್ದು ಮಾಡುತ್ತಿರುವುದು ಬರೀ ‘ಕೊರೊನಾ’ ಮತ್ತು ಅದು ತಂದಿಟ್ಟ ಆತಂಕ!

ಗುತ್ತಿಗೆ ಪಡೆದಿದ್ದ ಮುಸ್ಲಿಂ ವ್ಯಾಪಾರಿಗಳು ಮಾವಿನ ತೋಟಗಳತ್ತ ತಲೆ ಹಾಕಿಲ್ಲ. ಕೊಯ್ಲು ಮಾಡಿ ಎಪಿಎಂಸಿಗೆ ಒಯ್ದರೆ ಕನಿಷ್ಠ ಧಾರಣೆಯೂ ಇಲ್ಲ. ಮಾವಿನ ಸುಗ್ಗಿ ಆರಂಭವಾಗಿದ್ದು, ಹದಿನೈದು ದಿನಗಳಲ್ಲಿ ಎಲ್ಲ ಸರಿ ಹೋಗಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

‘ಮೈಸೂರು ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಿದೆ. ಶೇ 90ರಷ್ಟು ಫಸಲು ನೆರೆಯ ಕೇರಳ, ತಮಿಳುನಾಡು ಅಲ್ಲದೇ ನವದೆಹಲಿಗೂ ಇಲ್ಲಿಂದ ರವಾನೆಯಾಗುತ್ತಿತ್ತು. ಈ ಬಾರಿ ‘ಕೊರೊನಾ’ ಭೀತಿಯಿಂದಾಗಿ ಫಸಲು ಕೇಳುವವರೇ ಇಲ್ಲವಾಗಿದ್ದಾರೆ. ಬೆಳೆಗಾರರಿಗೆ ದಿಕ್ಕೇ ತೋಚದಂತಾಗಿದೆ’ ಎನ್ನುತ್ತಾರೆ ರೈತ ಕೆ.ಎಂ.ಅನುರಾಜ್.

‘ಹಿಂದಿನ ವರ್ಷ ಮಳೆ ಹಾನಿಗೆ ತತ್ತರಿಸಿದ್ದೆವು. ಈ ಬಾರಿ ಇಳುವರಿಯೂ ಕಡಿಮೆ. ನಮಗೋ ಕೊಯ್ಲು ಕಷ್ಟ. ನಮ್ಮದೇ ಮಾರುಕಟ್ಟೆ ಜಾಲವೂ ಇಲ್ಲ. ಹಣ್ಣುಗಳನ್ನು ಸಂಗ್ರಹಿಸಿಡಲು ಕೋಲ್ಡ್‌ ಸ್ಟೋರೇಜ್ ಇಲ್ಲ. ಇಂತಹ ಹೊತ್ತಲ್ಲಿ ‘ಕೊರೊನಾ’ ಚೇತರಿಸಿಕೊಳ್ಳಲಾಗದಂತ ಹೊಡೆತ ನೀಡುತ್ತಿದೆ’ ಎಂದು ಮಾವು ಬೆಳೆಗಾರ ಎಚ್.ಜಯಣ್ಣ ಅಸಹಾಯಕತೆ
ವ್ಯಕ್ತಪಡಿಸಿದರು.

‘ನನ್ನ 60 ಮರಗಳನ್ನು ₹ 95 ಸಾವಿರಕ್ಕೆ ಗುತ್ತಿಗೆ ಕೊಟ್ಟಿದ್ದೆ. ₹ 5,000 ಮುಂಗಡ ಕೊಟ್ಟಿದ್ದರು. ಫಸಲು ಕೊಯ್ಲಿಗೆ ಬಂದಿದೆ. ಗುತ್ತಿಗೆ ಪಡೆದಿದ್ದ ವ್ಯಾಪಾರಿ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ತೋಟದಲ್ಲಿ ನವಿಲು, ಕಾಡು ಹಂದಿ ಕಾಟ ಹೆಚ್ಚಿದೆ. ಈ ಹಿಂದೆಲ್ಲ, ಜ್ಯೂಸ್ ಫ್ಯಾಕ್ಟರಿಯವರು, ನಮ್ಮೂರಿಗೇ ಬಂದು ಮಾವು ಖರೀದಿಸುತ್ತಿದ್ದರು. ಈ ಸಲ ಅವರೂ ಬಂದಿಲ್ಲ. ಏನು ಮಾಡಬೇಕೆಂಬುದೇ ತೋಚದಾಗಿದೆ’ ಎಂದು ರೈತ ಸ್ವಾಮಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಎಕರೆ ಮಾವಿನ ತೋಟ ನಿರ್ವಹಣೆಗೆ ವಾರ್ಷಿಕ ಕನಿಷ್ಠ ₹20,000 ಖರ್ಚು ಬರುತ್ತೆ. ಈ ಬಾರಿ ಮಾಡಿದ ಖರ್ಚು ಕೂಡ ಮರಳುತ್ತದೆ ಎನ್ನುವ ಸ್ಥಿತಿ ಇಲ್ಲ. ಸರ್ಕಾರವೇ ನೆರವಿಗೆ ಬರಬೇಕು’ ಎನ್ನುತ್ತಾರೆ ಗ್ರಾಮದ ಮೊಳ್ಳೇಗೌಡ.

ಗಡಿ ಬಂದ್: ಹೆಚ್ಚಿದ ಸಂಕಷ್ಟ

‘ಬೆಳೆಗಾರರೇ ಮಾರಾಟ ಮಾಡಲು ಯಾವುದೇ ಅಡ್ಡಿಯಿಲ್ಲ. ಈ ಭಾಗದ ಶೇ 90ರಷ್ಟು ಮಾವು ಕೇರಳ, ತಮಿಳುನಾಡು, ಬೆಂಗಳೂರಿಗೆ ಹೋಗುತ್ತಿತ್ತು. ಈಗ ಗಡಿ ಬಂದ್ ಆಗಿದೆ. ಬೆಂಗಳೂರಿಗೆ ಕೋಲಾರ, ರಾಮನಗರ ಭಾಗದ ಮಾವು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಇದು ಜಿಲ್ಲೆಯ ಬೆಳೆಗಾರರಿಗೆ ಹೊಡೆತ ನೀಡುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ರುದ್ರೇಶ್‌ ತಿಳಿಸಿದರು.

ಕೃಷಿ ಉತ್ಪನ್ನ ಸಾಗಣೆಗೆ ಸಹಾಯವಾಣಿ

ರಾಯಚೂರು: ರೈತರು ಬೆಳೆದ ಹಣ್ಣು, ತರಕಾರಿ ಸಾಗಣೆ ಮತ್ತು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಸಾರಿಗೆ ಇಲಾಖೆ ರಾಜ್ಯಮಟ್ಟದಲ್ಲಿ ಸಹಾಯವಾಣಿ ಆರಂಭಿಸಿದೆ ಎಂದು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಸಹಾಯವಾಣಿ ಸಂಖ್ಯೆ: 080– 22236698 ಅಥವಾ 94498 63214.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT