ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ವಿಧಾನಸೌಧ ಚಲೊ

ಅತಿವೃಷ್ಟಿ, ಅನಾವೃಷ್ಟಿಗೆ ಸಿಗದ ಪರಿಹಾರ * ಉದ್ಯಾನದಲ್ಲೇ ರೈತರನ್ನು ತಡೆದ ಪೊಲೀಸರು
Last Updated 10 ಅಕ್ಟೋಬರ್ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ‘ವಿಧಾನಸೌಧ ಚಲೊ’ ಹಮ್ಮಿಕೊಳ್ಳಲಾಗಿತ್ತು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬೆಳಿಗ್ಗೆ ಬಂದಿಳಿದಿದ್ದ ಎಲ್ಲ ಜಿಲ್ಲೆಗಳ ರೈತರು, ಮೆರವಣಿಗೆ ಮೂಲಕ ಸ್ವಾತಂತ್ರ್ಯ ಉದ್ಯಾನ ಮಾರ್ಗವಾಗಿ ವಿಧಾನಸೌಧದತ್ತ ಮೆರವಣಿಗೆಯಲ್ಲಿ ಸಾಗಿದರು.

ಉದ್ಯಾನದ ಎದುರೇ ರೈತರನ್ನು ತಡೆದ ಪೊಲೀಸರು, ವಿಧಾನಸೌಧಕ್ಕೆ ಹೋಗಲು ಅವಕಾಶ ನೀಡಲಿಲ್ಲ. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದ ರೈತರು, ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಧ್ಯಾಹ್ನದ ಹೊತ್ತಿಗೆ ಭೇಟಿ ನೀಡಿದರು.

ಅವರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ದೇಶಕ್ಕೆ ಅನ್ನ ನೀಡುವ ರೈತರುಭೂಕುಸಿತ, ಬರಗಾಲ, ಪ್ರವಾಹದಿಂದ ಬೀದಿಗೆ ಬಂದಿದ್ದಾರೆ. ಇವರನ್ನು ಗೌರವದಿಂದ ನೋಡಿಕೊಳ್ಳಬೇಕಾದ ಸರ್ಕಾರಗಳು, ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿವೆ. ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ವಿಧಾನಸೌಧ ಚಲೊ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ನೆರೆ ಬಂದು ಎರಡೂವರೆ ತಿಂಗಳಾಯ್ತು. ಲಕ್ಷಾಂತರ ಮಂದಿ ಮನೆ, ಹೊಲ ಹಾಗೂ ಜಾನುವಾರುಗಳನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಅವರು ಆಶ್ರಯ ಪಡೆದಿದ್ದ ಪುನರ್ವಸತಿ ಕೇಂದ್ರಗಳನ್ನೂ ಮುಚ್ಚಲಾಗುತ್ತಿದ್ದು, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಹೋಗಿ ಎಂದು ಅಧಿಕಾರಿಗಳೇ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಸಾಲ ನೀಡಿದ್ದ ಕೆಲವರು, ಇದೇ ಕೇಂದ್ರಗಳಲ್ಲಿ ಜನರಿಂದ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ’ ಎಂದರು.

ಲಕ್ಷ್ಮಣ ಸವದಿ, ‘22 ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದೆ. ಸಮಸ್ಯೆ ಎದುರಿಸಬೇಕಾದ ಸವಾಲು ಸರ್ಕಾರಕ್ಕಿದೆ. ನೀವೆಲ್ಲರೂ ಸಹಕಾರ ನೀಡಬೇಕು. ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಜೊತೆ ಚರ್ಚಿಸುವೆ’ ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪದ ರೈತರು, ‘ವಿಧಾನಸೌಧಕ್ಕೆ ವಾಪಸು ಹೋಗಿ. ಚರ್ಚೆ ಮಾಡಿ ಏನು ತೀರ್ಮಾನ ತೆಗೆದುಕೊಳ್ಳುತ್ತಿರೋ ನೋಡುತ್ತೇವೆ. ಅಲ್ಲಿಯವರೆಗೂ ಜಾಗ ಬಿಟ್ಟು ಹೋಗುವುದಿಲ್ಲ’ ಎಂದು ಪಟ್ಟು ಹಿಡಿದರು. ಲಕ್ಷ್ಮಣ ಸವದಿ ಅಲ್ಲಿಂದ ವಾಪಸು ಹೋದರು.

ಕಾನೂನು ನೆಪ ಹೇಳಿದ ಸವದಿ

‘ಅಧಿವೇಶನ ನಡೆಯುತ್ತಿದೆ. ಪರಿಹಾರದ ಆಶ್ವಾಸನೆ ಘೋಷಣೆ ಮಾಡಲು ಆಗುವುದಿಲ್ಲ. ಆ ರೀತಿ ಮಾಡಿದರೆ, ಕಾನೂನಿನಲ್ಲಿ ನಾನು ಅಪರಾಧಿ ಆಗುತ್ತೇನೆ’ ಎಂದು ಲಕ್ಷ್ಮಣ ಸವದಿ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರೊಬ್ಬರು, ‘ನಿಮಗೆ ಬೇಕಾದ ಕೆಲಸಗಳನ್ನುತ್ವರಿತವಾಗಿ ಮಾಡುತ್ತೀರಾ, ಅವಾಗ ಕಾನೂನು ಅಡ್ಡಿ ಬರುವುದಿಲ್ಲವೇ? ಕಾನೂನು ನೆಪ ಹೇಳಿ ರೈತರನ್ನು ವಂಚಿಸಬೇಡಿ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT