ಭಾನುವಾರ, ಮೇ 16, 2021
25 °C
ಬರ ಮತ್ತು ಪ್ರವಾಹ ದೇವರನಾಡಿಗೆ ‘ಕಟ್ಟಿಟ್ಟ ಬುತ್ತಿ’: ಎಚ್ಚರಿಕೆ

ಅರಣ್ಯ ನಾಶ ತಂದ ‘ಮಹಾ ಪ್ರವಾಹ: ಭಾರತೀಯ ವಿಜ್ಞಾನ ಸಂಸ್ಥೆ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಶ್ಚಿಮಘಟ್ಟದಲ್ಲಿ 40 ವರ್ಷಗಳ ಅರಣ್ಯ ಮತ್ತು ಜೀವವೈವಿಧ್ಯದ ನಾಶವೇ ಕೇರಳ ಮತ್ತು ಕೊಡಗಿನ ದುಃಸ್ಥಿತಿಗೆ ಕಾರಣ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಅಧ್ಯಯನ ಕೇಂದ್ರದ ಡಾ.ಟಿ.ವಿ.ರಾಮಚಂದ್ರ ಹೇಳಿದ್ದಾರೆ.

‘2015ಕ್ಕೂ ಮೊದಲು ಕೇರಳ ವ್ಯಾಪ್ತಿಯಲ್ಲಿರುವ ಪ‍ಶ್ಚಿಮಘಟ್ಟದ ಪರಿಸ್ಥಿತಿ ಕುರಿತು ನಮ್ಮ ತಂಡ ಅಧ್ಯಯನ ನಡೆಸಿತ್ತು. ಅಲ್ಲಿನ ವಾಸ್ತವಾಂಶ ಆಧರಿಸಿ 2016ರಲ್ಲಿ ಸಿದ್ಧಪಡಿಸಿದ್ದ ವರದಿಯಲ್ಲಿ, ಅರಣ್ಯ ನಾಶದಿಂದಾಗಿ ಮಹಾಪ್ರವಾಹ ಹಾಗೂ ಭೀಕರ ಬರ ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದೆವು. ಅದೀಗ ನಿಜವಾಗಿದೆ’ ಎಂದು ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವರದಿಯಲ್ಲಿರುವ ಅಂಶಗಳೇನು: ಪಶ್ಚಿಮಘಟ್ಟದಲ್ಲಿ ಭಾರಿ ಪ್ರಮಾಣದ ಅರಣ್ಯ ನಾಶ, ಭೂಬಳಕೆ ಬದಲಾವಣೆ, ನಗರೀಕರಣ, ಮಿತಿಮೀರುತ್ತಿರುವ ಪ್ಲಾಂಟೇಷನ್‌ ತೋಟಗಳು, ಆ ಭಾಗದಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಲಿದೆ. ಮಾನವ ಹಸ್ತಕ್ಷೇಪದಿಂದ ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಶಾಪವಾಗಿ ಕಾಡಲಿದೆ ಎಂಬುದು ಅಧ್ಯಯನ ಸ್ಪಷ್ಟವಾಗಿ ಉಲ್ಲೇಖಿಸಿದೆ.

‘ಭಾರಿ ಮಳೆ ಸುರಿದಾಗ ಫಟ್ಟ ಪ್ರದೇಶದಲ್ಲಿ ಊಹಿಸಲೂ ಆಗದ ಪ್ರವಾಹ ಸೃಷ್ಟಿ ಆಗುತ್ತದೆ. ಈ ಪ್ರವಾಹವನ್ನು ತಡೆದುಕೊಳ್ಳುವ ನೈಸರ್ಗಿಕ ವ್ಯವಸ್ಥೆಯೇ ಪಶ್ಚಿಮಘಟ್ಟದಲ್ಲಿ ನಾಶ ಆಗಿದೆ. ಇದರಿಂದ ಭಾರಿ ಹಾನಿ ಉಂಟು ಮಾಡುತ್ತದೆ’ ಎಂದು ವರದಿ ಹೇಳಿದೆ.

ಮಳೆಯ ನೀರಿನ ಪ್ರವಾಹ ಬೆಟ್ಟ– ಗುಡ್ಡಗಳಿಂದ ಮಣ್ಣನ್ನು ಹೊತ್ತು ಸಾಗುವುದರಿಂದ ಜಲಾಶಯಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿಕೊಳ್ಳುತ್ತದೆ. ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕುಸಿದು ಹೋಗುತ್ತದೆ. ಈಗಾಗಲೇ ಕೇರಳ ಜಲಾಶಯಗಳಲ್ಲಿ ಶೇ 22 ರಷ್ಟು ಹೂಳು ತುಂಬಿಕೊಂಡಿದೆ ವರದಿ ಹೇಳಿದೆ.

ವರದಿ ಸಿದ್ಧಪಡಿಸುವ ಹೊತ್ತಿಗೆ ಕೇರಳದಲ್ಲಿ ಬರಗಾಲ ಕಾಲಿಟ್ಟಿತ್ತು. ಗಿರಿಧಾಮದ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿತ್ತು. ಬಹಳಷ್ಟು ಜಲಾಶಯಗಳಲ್ಲಿ ನೀರು ಬರಿದಾಗಿ ಹೋಗಿತ್ತು. ಕುಡಿಯುವ ನೀರಿಗೂ ಸಂಕಷ್ಟ ಉಂಟಾಗಿತ್ತು.

ಮುಂದಿನ ತಲೆಮಾರು ಉಳಿಯಬೇಕು: ‘ಮುಂದಿನ ತಲೆಮಾರಿಗೆ ನಾಡು, ಪರಿಸರ, ನದಿ ಉಳಿಯಬೇಕಾದರೆ ಸರ್ಕಾರ  ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ರಾಮಚಂದ್ರ ತಿಳಿಸಿದರು.

ಪರಿಸರ, ಜೀವವೈವಿಧ್ಯ ಮತ್ತು ಅದರ ಸೂಕ್ಷ್ಮತೆ ಬಗ್ಗೆ ಎಳ್ಳಿನಷ್ಟು ಅರಿವು ಇಲ್ಲದ ರಾಜಕಾರಣಿಗಳು ಮನಸ್ಸಿಗೆ ತೋಚಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರಿಂದ ಮುಂದಿನ ತಲೆಮಾರು ಸಂಕಷ್ಟಕ್ಕೆ ತುತ್ತಾಗುತ್ತದೆ ಎಂದರು.

ಎಲ್ಲೆಲ್ಲಿ ಅರಣ್ಯ ನಾಶವಾಗಿ ಪ್ಲಾಂಟೇಷನ್‌ಗಳು, ರೆಸಾರ್ಟ್‌, ಕಟ್ಟಡಗಳನ್ನು ಅಧಿಕ ಪ್ರಮಾಣದಲ್ಲಿ ಎಬ್ಬಿಸಿದ್ದಾರೋ ಅಂತಹ ಕಡೆಗಳಲ್ಲೇ ಭೂಕುಸಿತ ಹೆಚ್ಚಾಗಿದೆ. ಮರಗಳು ದಟ್ಟವಾಗಿ ಇದ್ದ ಕಡೆಗಳಲ್ಲಿ ಹೆಚ್ಚಿನ ಅನಾಹುತ ಆಗಿಲ್ಲ. ಕೊಡಗು ಜಿಲ್ಲೆಯಲ್ಲಿ ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ಎಕರೆಗಳಷ್ಟು ಭೂಪರಿವರ್ತನೆ ಮಾಡಿ ತೋಟಗಳನ್ನು ಮಾಡಿದ್ದಾರೆ. ಮೂರು ಪ್ರಮುಖ ವ್ಯಕ್ತಿಗಳು 2,600 ಎಕರೆಗೂ ಹೆಚ್ಚು ಕಾಫಿ ತೋಟ ಮಾಡಿಕೊಂಡಿದ್ದಾರೆ. ಇದರಿಂದ ಅರಣ್ಯ ನಾಶವಾಗಿದೆ ಎಂದರು.

ಪಶ್ಚಿಮ ಘಟ್ಟದಲ್ಲಿ ಸ್ಥಳೀಯ ಜಾತಿಯ ಮರಗಳನ್ನು ನಾಶ ಮಾಡಿ, ಸ್ಥಳೀಯವಲ್ಲದ ಮರಗಳ ತೋಪು ಬೆಳೆಸಲಾಗಿದೆ. ವಿಶೇಷವಾಗಿ ಕಾವೇರಿ ನದಿ ಪಾತ್ರದಲ್ಲಿ ಒತ್ತುವರಿ ಹೆಚ್ಚಾಗಿದೆ. ಅರಣ್ಯ ದುರ್ಬಳಕೆಯೂ ಹೆಚ್ಚಾಗಿದೆ.  ಸ್ಥಳೀಯ ಪ್ರಭೇದದ ಮರಗಳು ದಟ್ಟವಾಗಿ ಇದ್ದಾಗ ಶೇ 50 ರಷ್ಟು ಮಳೆ ನೀರು ಇಂಗುತ್ತಿತ್ತು. ಗುಂಡು ತೋಪು ಇದ್ದರೆ ಇಂಗುವಿಕೆ ಪ್ರಮಾಣ ಕೇವಲ ಶೇ 20.  ಪ್ಲಾಂಟೇಶನ್‌ಗಳಿದ್ದರೆ ನೀರು ಇಂಗದೇ ಸಂಪೂರ್ಣ ಹರಿದು ಹೋಗುತ್ತದೆ ಎಂದು ರಾಮಚಂದ್ರ ತಿಳಿಸಿದರು.

ಪ್ರಕೃತಿಯಲ್ಲಿ ಏಳು ವರ್ಷ ಉತ್ತಮ ಮಳೆಯಾದರೆ, ಇನ್ನು ಏಳು ವರ್ಷ ಕಡಿಮೆ ಮಳೆ ಆಗುತ್ತದೆ. ಮಳೆಯಿಂದ ಅತಿಯಾದ ಹಾನಿ ಆದರೆ ಕಾಳಜಿ ತೋರುತ್ತಾರೆ. ಮಳೆ ಇಲ್ಲದ ವರ್ಷಗಳಲ್ಲಿ ಕಾಡು, ಬೆಟ್ಟ ನಾಶ ಮಾಡಿ ರಸ್ತೆ ಅಗಲೀಕರಣ, ತೋಟ– ರೆಸಾರ್ಟ್‌ ಇತ್ಯಾದಿಗಳ ನಿರ್ಮಾಣ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ತಿಳಿಸಿದರು.

ಅರಣ್ಯ ಎಂದು ಘೋಷಿಸಿರುವ ಪ್ರದೇಶದಲ್ಲಿ ಕನಿಷ್ಠ ಶೇ 40 ರಷ್ಟು ಅರಣ್ಯ ಇರಲೇಬೇಕು. ಆದರೆ, ಕೊಡಗಿನ ಕೆಲವು ಭಾಗದಲ್ಲಿ ಶೇ 18 ಕ್ಕೂ ಕಡಿಮೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಕಾಡಿನ ಪ್ರಮಾಣ ಶೇ 2 ಕ್ಕೂ ಕಡಿಮೆ ಇದೆ ಎಂದು ಅವರು ವಿಷಾದಿಸಿದರು.

 ‘ಅರಣ್ಯದ ಮಾರಣ ಹೋಮದಿಂದ ಭವಿಷ್ಯದಲ್ಲಿ ಒದಗಬಹುದಾದ ವಿಪತ್ತುಗಳ ಬಗ್ಗೆ ಹಿಂದೆಯೇ ಅಧ್ಯಯನದ ವರದಿಯಲ್ಲಿ ಗಂಭೀರ ಎಚ್ಚರಿಕೆ ನೀಡಲಾಗಿತ್ತು. ಕೇರಳ ಮತ್ತು ಕೊಡಗು ಪಶ್ಚಿಮಘಟ್ಟವನ್ನು ಹಂಚಿಕೊಂಡಿವೆ. ಎರಡೂ ಕಡೆಯೂ ಅರಣ್ಯನಾಶದ ಪರಿಣಾಮ ಅನುಭವಿಸಲೇಬೇಕು’ ಎಂದು ಹೇಳಿದರು..

ಧನ ದಾಹಕ್ಕೆ ಕರಗಿದ ಕಾಡು
ಕೇರಳಿಗರ ವಾಣಿಜ್ಯ ಬೆಳೆಗಳ ದಾಹಕ್ಕೆ 1973 ರಿಂದ 2016 ರವರೆಗೆ ಒಟ್ಟು ಕರಗಿ ಹೋದ ಕಾಡು 9,06,440 ಹೆಕ್ಟೇರ್‌ಗಳು. ಅಂದರೆ, 9064.4 ಚದರ ಕಿ,ಮೀ ಅರಣ್ಯ ಪ್ರದೇಶ ನಾಶವಾಗಿದೆ ಎಂಬುದು ವಿಜ್ಞಾನಿಗಳ ಅಂದಾಜು.
ಕೊಡಗಿನಲ್ಲಿ ಆದ ನಾಶ: ಕೊಡಗು ಜಿಲ್ಲೆಯಲ್ಲಿ ಕೇವಲ 10 ವರ್ಷಗಳ (2005–15) ಅವಧಿಯಲ್ಲಿ 2,800 ಎಕರೆ ಅರಣ್ಯಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಗೊಳಿಸಲಾಗಿದೆ.

ಮಂಗಳೂರಿನಲ್ಲಿ ಡಾಪ್ಲರ್‌ ರೆಡಾರ್‌ ಕೇಂದ್ರ
ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ಹವಾಮಾನ ಬದಲಾವಣೆ ಬಗ್ಗೆ ನಿಖರ ಮಾಹಿತಿ ಮತ್ತು ಮುನ್ಸೂಚನೆ ನೀಡುವ ಅತ್ಯಧಿಕ ಸಾಮರ್ಥ್ಯದ ರೆಡಾರ್‌ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಕರ್ನಾಟಕ ಮತ್ತು ಉತ್ತರ ಕೇರಳ ಭಾಗದ ಹವಾಮಾನ ಬದಲಾವಣೆ ಚಂಡಮಾರುತ, ಮೋಡಗಳ ಚಲನೆ, ಮಳೆ, ಪ್ರವಾಹಗಳ ಬಗ್ಗೆ ಸಿ–ಬ್ಯಾಂಡ್‌ ಡಾಪ್ಲರ್‌ ರೆಡಾರ್‌ ಕೇಂದ್ರ ಕರಾರುವಾಕ್ಕಾದ ಮುನ್ಸೂಚನೆ ನೀಡಲಿದೆ.

2019ರ ಅಂತ್ಯದ ವೇಳೆಗೆ ಈ ಕೇಂದ್ರ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯ ತಿಳಿಸಿದೆ.

ಮಂಗಳೂರು ಜತೆಗೆ ಪೋರ್ಟ್ ಬ್ಲೇರ್‌, ಅನಂತಪುರ, ಸಂಬಾಲಪುರ ಮತ್ತು ಮುಂಬೈನಲ್ಲಿ ಎರಡನೇ ಕೇಂದ್ರ ಸ್ಥಾಪನೆಯಾಗಲಿವೆ. ಸದ್ಯ ಕೊಚ್ಚಿಯಲ್ಲಿ ಎರಡು ಮತ್ತು ತಿರುವನಂತಪುರದಲ್ಲಿ ಒಂದು ರೆಡಾರ್‌ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ಇಂತಹ ಐದು ರೆಡಾರ್‌ ಕಾರ್ಯನಿರ್ವಹಿಸುತ್ತಿವೆ.

ಚಂಡಮಾರುತ ಮುನ್ಸೂಚನಾ ಕೇಂದ್ರ: ಇದೇ ಅಕ್ಟೋಬರ್‌ನಲ್ಲಿ ಕೇರಳದ ತಿರುವನಂತಪುರದಲ್ಲಿ ಚಂಡಮಾರುತ ಮುನ್ಸೂಚನಾ ಕೇಂದ್ರವನ್ನೂ ಸ್ಥಾಪಿಸಲಾಗುವುದು ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್‌ ತಿಳಿಸಿದ್ದಾರೆ.

ಮುಂಬೈ, ಅಹಮದಾಬಾದ್‌, ಚೆನ್ನೈ, ವಿಶಾಖಪಟ್ಟಣ ಸೇರಿದಂತೆ ದೇಶದಲ್ಲಿ ಈಗಾಗಲೇ ಆರು ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಭಾರತೀಯ ಹವಾಮಾನ ಇಲಾಖೆಗೆ ತಿರುವನಂತಪುರ ಮತ್ತು ಮಂಗಳೂರು ಕೇಂದ್ರಗಳ ಹೆಚ್ಚುವರಿ ಜವಾಬ್ದಾರಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

***
ಮೂರ್ಖ ರಾಜಕಾರಣಿಗಳಿಗೆ ಮುಂದೆ ಸಂಭವಿಸುವ ದುರಂತದ ಅರಿವಿಲ್ಲ
ಡಾ. ಟಿ.ವಿ.ರಾಮಚಂದ್ರ, ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು