ಮಂಗಳವಾರ, ಅಕ್ಟೋಬರ್ 15, 2019
29 °C

ಸರ್ಕಾರ–ಪಕ್ಷದ ನಡುವೆ ಮುಸುಕಿನ ಗುದ್ದಾಟ: ನಗುತ್ತಲೇ ‍ಉತ್ತರಿಸಿದ ಯಡಿಯೂರಪ್ಪ

Published:
Updated:

ಬೆಳಗಾವಿ: ‘ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರು ಬೆಳಿಗ್ಗೆ ನಮ್ಮ ಮನೆಗೆ ಬಂದು ಉಪಾಹಾರ ಸೇವಿಸಿ ಹೋಗಿದ್ದಾರೆ? ಬಿಬಿಎಂಪಿ ಮೇಯರ್‌ ಆಗಿ ನಮ್ಮವರನ್ನೇ ಆಯ್ಕೆ ಮಾಡಿದ್ದೇವೆ. ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಎಂದು ನನ್ನಿಂದಲೇ ಹೇಳಿಸಬೇಡಿ’ ಎಂದು ನಗುತ್ತಲೇ ಹೇಳಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ಕಾಂಗ್ರೆಸ್‌ನವರು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಹೇಳಲು ಸಿದ್ಧನಿಲ್ಲ. ವಿರೋಧ ಪಕ್ಷವಾಗಿ ಅವರ ಕೆಲಸ ಮಾಡುತ್ತಾರೆ. ಅದನ್ನು ನಾನು ವಿರೋಧಿಸುವುದಿಲ್ಲ. ಮೂರು ದಿನಗಳವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ಕರೆದಿದ್ದೇವೆ. ಬೇಕಿದ್ದರೆ ಅಲ್ಲಿ ಚರ್ಚಿಸಲಿ’ ಎಂದು ತಿರುಗೇಟು ನೀಡಿದರು.

‘ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರದಿಂದ ಹೆಚ್ಚು ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಇರಲಿಲ್ಲ. ಹೀಗಾಗಿ, ಇದುವರೆಗೂ ಸಭೆ ಆಗಿಲ್ಲ. ಯಾವುದೇ ರಾಜ್ಯಕ್ಕೂ ಹಣ ಬಂದಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಕೇಂದ್ರದಿಂದ ಹಣ ಬಂದಿಲ್ಲವೆಂದು ಕೈ ಕಟ್ಟಿ ಕುಳಿತಿಲ್ಲ. ₹ 3,500 ಕೋಟಿ ಬಿಡುಗಡೆ ಮಾಡಿದ್ದೇವೆ. ಇನ್ನೂ ಹೆಚ್ಚು ಕೊಡುವುದು ನಮ್ಮ ಕರ್ತವ್ಯ. ಕೇಂದ್ರದಿಂದ ಅನುದಾನ ಬಂದ ಕೂಡಲೇ ಬೆಳೆ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

ಕೇಂದ್ರವನ್ನು ಕೇಳಲು ಯಡಿಯೂರಪ್ಪಗೆ ತಾಕತ್ತಿಲ್ಲ ಎಂಬ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ತಾಕತ್ತಿನ ಪ್ರಶ್ನೆಯಲ್ಲ. ಶಾಂತವಾಗಿ ಅನುದಾನ ಪಡೆದುಕೊಳ್ಳುಬೇಕಾಗಿದೆ’ ಎಂದರು.

‘ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಔರಾದ್ಕರ್ ವರದಿಯ ಶಿಫಾರಸುಗಳ ಸಂಪೂರ್ಣ ಜಾರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

Post Comments (+)