ಶನಿವಾರ, ಜನವರಿ 18, 2020
21 °C
ಕೆಎಸ್‌ಒಯುನಲ್ಲಿ ಅಕ್ರಮ ನಡೆಸಿದ ಆರೋಪ

ಕೆಎಸ್‌ಒಯು: ಮೂವರು ಮಾಜಿ ಕುಲಪತಿಗಳ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರೊ.ಕೆ.ಎಸ್‌.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್‌ ಮತ್ತು ಕೆ.ಸುಧಾರಾವ್ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಇಲ್ಲಿನ ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ವರದಿಯ ಆಧಾರದ ಮೇಲೆ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ), 409 (ಸರ್ಕಾರಿ ಉದ್ಯೋಗಿಯಾಗಿ ನಂಬಿಕೆ ದ್ರೋಹ), 420 (ವಂಚನೆ) ಮತ್ತು 34 (ಅಪರಾಧಿಕ ಸಂಚು) ಅನ್ವಯ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ 2016ರಲ್ಲಿ ಇದೇ ಸಮಿತಿಯ ವರದಿ ಆಧರಿಸಿ ಇವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

ಈಗಿನ ಎಫ್‌ಐಆರ್‌ನಲ್ಲಿ ಏನಿದೆ?: ವಿ.ವಿಯು ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳನ್ನು ಆರಂಭಿಸಲು ಐಇಎಂ ಮತ್ತು ಸ್ಕೂಪ್ ಎಂಬ ಸಂಸ್ಥೆಗಳ ಜತೆ 2010ರ ಬಳಿಕ ಐದು ಬಾರಿ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಒಪ್ಪಿಗೆ ಪಡೆದಿಲ್ಲ. ಜತೆಗೆ, ‘ಇಂಟಿಗ್ರೇಟೆಡ್ ವೆಬ್‌ ಬೇಸ್ಡ್‌ ಸಿಸ್ಟಮ್’ ಜಾರಿಗೆ ಐಇಎಂ ಸಂಸ್ಥೆಗೆ 2012ರಲ್ಲಿ ₹ 1 ಕೋಟಿ ಮುಂಗಡ ನೀಡಿರುವುದರಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್ ಅಲ್ಲದೆ, ನಿವೃತ್ತ ಕುಲಸಚಿವರಾದ ಪ್ರೊ.ಬಿ.ಎಸ್.ವಿಶ್ವನಾಥ್, ಪ್ರೊ.ಬಿ.ಎಸ್.ನಾಯಕ ಹಾಗೂ ವಿ.ವಿಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ನಿರ್ದೇಶಕ ಕಮಲೇಶ್ ಅವರ ಹೆಸರುಗಳೂ ಎಫ್‌ಐಆರ್‌ನಲ್ಲಿ ಇವೆ.

ಕೆ.ಸುಧಾರಾವ್ ವಿರುದ್ಧವೂ ಎಫ್‌ಐಆರ್: 2003ರಿಂದ 2007ರ ವರೆಗೆ ವಿ.ವಿ ಕುಲಪತಿಯಾಗಿದ್ದ ಪ್ರೊ.ಕೆ.ಸುಧಾರಾವ್ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಇವರು ತಮ್ಮ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಕುರಿತು ರಾಜ್ಯ ಸರ್ಕಾರದ ಸಲಹೆ ಪಡೆಯದೆಯೇ ಖಾಸಗಿ ಸಂಘ ಸಂಸ್ಥೆ, ಟ್ರಸ್ಟ್‌ಗಳ ಜತೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಡಿಯ ನಿಯಂತ್ರಣ ಸಂಸ್ಥೆಗಳು ನೀಡಿರುವ ನಿರ್ದೇಶನಗಳನ್ನು ಪಾಲಿಸದೆ, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಮೀರಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಕುರಿತು ಕೆಎಸ್ಒಯುನ ಈಗಿನ ಕುಲಸಚಿವ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು